ಫಲಿತಾಂಶ ಬದಲಿಸಬಲ್ಲ ಪಕ್ಷೇತರರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 1
ಬಿಎಸ್ಸಾರ್ ಕಾಂಗ್ರೆಸ್ ಸ್ಥಾಪಿಸಿ, ಕೈ ಸುಟ್ಟುಕೊಂಡು ಮಾತೃಪಕ್ಷ ಬಿಜೆಪಿಗೆ ಮರಳಿರುವ ಬಿ. ಶ್ರೀರಾಮುಲು ಈಗ ರಾಷ್ಟ್ರ ರಾಜಕಾರಣದಲ್ಲಿ ಭವಿಷ್ಯ ಕಂಡುಕೊಳ್ಳುವ ತವಕದಲ್ಲಿದ್ದಾರೆ. ಇವರಿಗೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುತ್ತಿದೆ.
ಈ ಬಾರಿ ಚುನಾವಣೆ ಗೆಲ್ಲಲೇಬೇಕು ಎಂಬ ದೃಷ್ಟಿಯಿಂದ ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದೆ. ಹೀಗಾಗಿ, ಚುನಾವಣಾ ಕಣ ರಂಗೇರುತ್ತಿದೆ. ಕಳೆದ ಬಾರಿ ಗಣನೀಯ ಸಂಖ್ಯೆಯಲ್ಲಿ ಮತಗಳನ್ನು ಕಸಿದು ಬಿಜೆಪಿಗೆ ಗೆಲವು ತಂದುಕೊಟ್ಟಿದ್ದ ಪಕ್ಷೇತರರು ಈ ಬಾರಿಯೂ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಶ್ರೀರಾಮುಲು ಸ್ಪರ್ಧಿಸಿರುವುದರಿಂದ ಬಿಜೆಪಿ ಗೆಲವು ನಿರಾಯಾಸ ಎಂದು ಮೊದಲು ಲೆಕ್ಕ ಹಾಕಲಾಗಿತ್ತು. ಆದರೆ, ಈಗ ಮುನಿಸಿಕೊಂಡಿದ್ದ ಬಳ್ಳಾರಿಯ ಕಾಂಗ್ರೆಸ್ ಮುಖಂಡರು ಒಂದಾಗಿದ್ದಾರೆ. ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಜಾತಿ ಅಲೆ, ಅಭ್ಯರ್ಥಿಗಳ ವರ್ಚಸ್ಸೂ ಕೆಲಸ ಮಾಡುತ್ತಿವೆ. ಪೈಪೋಟಿ ಹೆಚ್ಚಿದಷ್ಟೂ ಗೆಲುವಿನ ಅಂತರ ಕಮ್ಮಿಯಾಗುತ್ತದೆ. ಕುತೂಹಲ ಹೆಚ್ಚುತ್ತದೆ.
2243 ಮತಗಳಿಂದ ಸೋತಿದ್ದ ಕಾಂಗ್ರೆಸ್: ರೆಡ್ಡಿ ಸಹೋದರರು ಹಾಗೂ ಬಿ. ಶ್ರೀರಾಮುಲು ಅಧಿಕಾರಾವಧಿಯಲ್ಲಿ 2008ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತ್ತು. ಅದಕ್ಕಿಂತ ಹೆಚ್ಚಾಗಿ, ರೆಡ್ಡಿ ಸಹೋದರರ ವಿರುದ್ಧವಾಗಿದ್ದ ಅಲೆ ಕಾಂಗ್ರೆಸ್ನ್ನು ಗೆಲುವಿನ ಅಂಚಿಗೆ ಕರೆದೊಯ್ದಿತ್ತು. ಕಾಂಗ್ರೆಸ್ನ ಎನ್.ವೈ. ಹನುಮಂತಪ್ಪ 3,99,970 ಮತ ಪಡೆದರೆ, 4,02,213 ಮತ ಗಳಿಸಿದ ಬಿಜೆಪಿಯ ಜೆ. ಶಾಂತಾ ಕೇವಲ 2,243 ಮತಗಳಿಂದ ಗೆದ್ದು ಸಂಸತ್ ಪ್ರವೇಶಿಸಿದರು. ಸ್ವಲ್ಪವೇ ಮತಗಳ ಅಂತರದಿಂದ ಸೋತಿದ್ದ ಹನುಮಂತಪ್ಪ ಅವರಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ.
58 ಸಾವಿರ ಮತ ಪಡೆದ ಪಕ್ಷೇತರರು: ಕಳೆದ ಬಾರಿ ಕಣದಲ್ಲಿದ್ದ 9 ಮಂದಿ ಪಕ್ಷೇತರರು ಬರೊಬ್ಬರಿ 58 ಸಾವಿರ ಮತ ಬಾಚಿದ್ದರು. ಇದು ಫಲಿತಾಂಶದ ದಿಕ್ಕನ್ನೇ ಬದಲಿಸಿತ್ತು.
ಪಕ್ಷೇತರರು ಇಷ್ಟು ಪ್ರಮಾಣದ ಮತ ಪಡೆಯದಿದ್ದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇತ್ತು ಎಂದು ಫಲಿತಾಂಶವನ್ನು ವಿಶ್ಲೇಷಿಸಲಾಗಿತ್ತು. ಕಳೆದ ಬಾರಿ ಮೂವರು ಪಕ್ಷೇತರರು, ಸಿಪಿಐ ಮತ್ತು ಬಿಎಸ್ಪಿ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಎಸ್ಪಿ- 14,708, ಸಿಪಿಐ (ಎಂಎಲ್) - 11540, ಮೂವರು ಪಕ್ಷೇತರರು 32,434 ಮತ ಗಳಿಸಿದ್ದರು.
12 ಅಭ್ಯರ್ಥಿಗಳು ಕಣದಲ್ಲಿ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರೆ, ಈ ಬಾರಿ 12 ಜನ ಕಣದಲ್ಲಿದ್ದಾರೆ. ಬಿಜೆಪಿಯಿಂದ ಶ್ರೀರಾಮುಲು, ಕಾಂಗ್ರೆಸ್ನಿಂದ ಎನ್.ವೈ. ಹನುಮಂತಪ್ಪ, ಜೆಡಿಎಸ್ನಿಂದ ಆರ್. ರವಿನಾಯಕ್, ಬಿಎಸ್ಪಿಯಿಂದ ಬಿ. ರಾಮುಡು (ಅದ್ದಿಗೇರಿ ರಾಮಣ್ಣ), ಆಮ್ ಆದ್ಮಿಯಿಂದ ಶಿವಕುಮಾರ್ ಮಾಳಗಿ, ಎಸ್ಯುಸಿಐನಿಂದ ಎ. ದೇವದಾಸ, ಸಿಪಿಐ(ಎಂಎಲ್) ದೊಡ್ಡಮನಿ ಪ್ರಸಾದ್, ಕರುನಾಡು ಪಕ್ಷದ ಜಿ. ನಟರಾಜ, ಸಿಪಿಐ (ಮಾರ್ಕಿಸ್ಟ್-ಲೆನಿನಿಸ್ಟ್) ರೆಡ್ ಸ್ಟಾರ್ನ್ ಕಾಮ್ರೆಡ್ ಎಸ್. ಭೀಮಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕೆ. ರಾಘವೇಂದ್ರ, ಪಕ್ಷೇತರ ಅಭ್ಯರ್ಥಿಗಳಾದ ಎನ್.ಬಿ. ಕೃಷ್ಣಪ್ಪ ನಾಯಕ, ಎನ್.ಆರ್. ಮಲ್ಲಯ್ಯಸ್ವಾಮಿ ಕಣದಲ್ಲಿದ್ದಾರೆ. ಆಮ್ ಆದ್ಮಿಯು ಹುಮ್ಮಸ್ಸಿನಿಂದಲೇ ಬಳ್ಳಾರಿಯಲ್ಲಿ ಸಾಗಿದೆ.
ಈ ಎಲ್ಲ ಅಂಶಗಳು ಈ ಬಾರಿ ಚುನಾವಣೆಯಲ್ಲಿ ಸೋಲು-ಗೆಲವಿನಲ್ಲಿ ಕುತೂಹಲಕಾರಿ ಅಂಶಗಳಾಗಿವೆ.
-ಶಶಿಧರ ಮೇಟಿ