ದಾರ್ಶನಿಕರ ಆದರ್ಶ ಅನುಸರಿಸಿ
ಬಳ್ಳಾರಿ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ರಾಮಕೃಷ್ಣ ಪರಮಹಂಸ, ಮಹಾತ್ಮಾ ಗಾಂಧೀಜಿ, ಅಬ್ದುಲ್ ಕಲಾಂ ಮುಂತಾದ ದಾರ್ಶನಿಕರ ಆದರ್ಶ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗಿ ರೂಪುಗೊಳ್ಳಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಎಲ್.ಆರ್.ನಾಯ್ಕ ಹೇಳಿದರು. ಸ್ಥಳೀಯ ಜಾಗೃತಿ ನಗರದ ಕೊಳಚೆ ಪ್ರದೇಶದಲ್ಲಿ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್.ಎಸ್.ಎಸ್. ಘಟಕಗಳು ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಶಿಬಿರಗಳಲ್ಲಿ ಸಮಾಜಸೇವೆ ಮಾಡುವುದಲ್ಲ. ಇಡೀ ಜೀವನದಲ್ಲಿ ಇತರರಿಗೆ ಒಳಿತನ್ನು ಮಾಡುವ ಗುಣ ಹೊಂದಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ, ವೇದಿಕೆಯ ಭಯವನ್ನು ಕಳೆದುಕೊಳ್ಳಲು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಎನ್.ಎಸ್.ಎಸ್. ಶಿಬಿರ ಅತ್ಯಂತ ಸಹಾಯಕವಾಗಿದೆ ಎಂದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂ. ಸೋಮಶೇಖರ್, ಈಡಿಗ ಮುರಳಿಶಂಕರಗೌಡ, ಕಾಲೇಜಿನ ಸಿಬ್ಬಂದಿ ಇದ್ದರು. ರಾಜೇಶ್ವರಿ ಪ್ರಾರ್ಥಿಸಿದರು. ಡಾ. ರಾಚಪ್ಪ ನಿರ್ವಹಿಸಿ, ಸೋಮಶೇಖರ್ ಸ್ವಾಗತಿಸಿದರು. ಮುತ್ತೇಗೌಡ ವಂದಿಸಿದರು.