ಕ್ರಾಂತಿವೀರರ ಆದರ್ಶ ಪಾಲಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 3
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಭಗತ್‌ಸಿಂಗ್‌ರಂತಹ ಮಹಾನ್ ಕ್ರಾಂತಿವೀರರ ಆದರ್ಶ ಗುಣಗಳನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜು ಉಪನ್ಯಾಸಕ ವಿಕ್ರಮ್ ಹಿರೇಮಠ್ ತಿಳಿಸಿದರು.
ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಸಹಯೋಗದಲ್ಲಿ ನಗರದ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಯೋಗ ಮಹೋತ್ಸವ ಹಾಗೂ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿಬಿರ ಯಶಸ್ವಿ: ವೀ.ವಿ. ಸಂಘದ ಮಾಜಿ ಕಾರ್ಯದರ್ಶಿ ಪಲ್ಲೇದ ಪಂಪಾಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹುತಾತ್ಮರಾದ ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಗೌರವ ಸಲ್ಲಿಸಲಾಯಿತು. ಇದೇ ವೇಳೆ ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣಬಸವರಾಜ್ ಮತ್ತು ಎಸ್.ಜಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಉಮಾಶಂಕರ ಅವರು ಯೋಗ ವಿವರಣೆಯನ್ನೊಳಗೊಂಡ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕರಿಬಸವರಾಜೇಂದ್ರ ಸ್ವಾಮೀಜಿ ಮತ್ತು ಕಲ್ಯಾಣಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ವಿ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ನಂತರ ಪತಂಜಲಿ ಯೋಗ ಸಮಿತಿಯ ಉತ್ತರ ಕರ್ನಾಟಕದ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭ ಮಹೇಶ್ ಆರ್ ಅಗರ್‌ವಾಲ್, ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಸವರಾಜ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ರಾಮುಲು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳಾದ ಪುರಾಣಿಕ, ಪಿ.ಎಂ. ನಟರಾಜ್, ವೀರೇಶ್, ಶಿವರಾಜ್, ಲೋಕೇಶ್, ಜಯಪ್ರಕಾಶ್, ಲಕ್ಷ್ಮಿರೆಡ್ಡಿ, ದೊಡ್ಡಬಸಪ್ಪ, ಕೃಷ್ಣಮೂರ್ತಿ ಸೇರಿದಂತೆ ಅನೇಕರು ಇದ್ದರು. ಕಣೇಕಲ್ ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಪವನ್‌ಕುಮಾರ್ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಸಿಎಂ ಗಂಗಾಧರಯ್ಯ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ರಾಮಾಂಜಿನೇಯಲು ವಂದಿಸಿದರು.