ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಿಕ್ಷಣದಿಂದ ಉತ್ತಮ ಭವಿಷ್ಯ

Mainashree
Updated On : 4 Apr 2014, 10:19 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 3
ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿ ಉತ್ತಮ ಭವಿಷ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ವಿ.ಸಿ. ಸವಡಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ಅಧ್ಯಯನ ಕೇಂದ್ರಗಳ ಸಂಯೋಜಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲೆಲ್ಲಿ ಕನ್ನಡವಿದೆಯೋ ಅಲ್ಲಲ್ಲಿ ಕನ್ನಡ ವಿಶ್ವವಿದ್ಯಾಲಯವಿರುತ್ತದೆ. ಇಲ್ಲಿಂದ ತರಬೇತಿ ಪಡೆದ ಸಂಯೋಜಕರು ವಿದ್ಯಾರ್ಥಿಗಳನ್ನು ಗುಣಮಟ್ಟದ ಶಿಕ್ಷಣದಿಂದ ರೂಪಿಸಬೇಕು. ಈ ಮೂಲಕ ನಿಮ್ಮ ಕೇಂದ್ರಗಳಿಗೆ ಮತ್ತು ಕನ್ನಡ ವಿವಿಗೆ ಒಳ್ಳೆಯ ಹೆಸರು ತನ್ನಿ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯಕಾರಿ ಸಮಿತಿ ಸದಸ್ಯ ಸುಭಾಷ್ ಸಿಂಗ್ ಜಮಾದಾರ್ ಮಾತನಾಡಿ, ದೂರಶಿಕ್ಷಣ ನಿರ್ದೇಶನಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತಕ್ಕೆ ಸಿಂಹಾವಲೋಕನ ನಡೆಸಬೇಕು. ಹೆಚ್ಚು ಹೆಚ್ಚು ದೂರಶಿಕ್ಷಣ ಕೇಂದ್ರಗಳನ್ನು ತೆರೆಯಬೇಕು. ಸಂಯೋಜಕರು ಹತ್ತು ಸಾವಿರ ತನಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಗುಣಾತ್ಮಕವಾಗಿ ಹೆಚ್ಚಿಸಬೇಕು. ಸಕಾಲದಲ್ಲಿ ಫಲಿತಾಂಶ ಬರುವಂತಾಗಬೇಕು. ವಿದ್ಯಾರ್ಥಿಗಳೇ ದೂರಶಿಕ್ಷಣದ ಬೆನ್ನೆಲುಬು ಎಂದು ತಿಳಿಸಿದರು. ಕನ್ನಡ ವಿವಿಯ ದೂರಶಿಕ್ಷಣ ನಿರ್ದೇಶನಾಲಯವು ತನ್ನದೇ ಕಟ್ಟಡ ಹೊಂದಲು ರು. 75 ಲಕ್ಷದ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಜ್ಞಾನ ಪ್ರಸಾರದ ಸದುದ್ದೇಶದಿಂದ ದೂರಶಿಕ್ಷಣ ಆರಂಭಿಸಲಾಗಿದೆಯೇ ಹೊರತು ವಾಣಿಜ್ಯ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು. ಕನ್ನಡದಲ್ಲಿ ಉನ್ನತ ಶಿಕ್ಷಣ ಕೊಡುವ ಧ್ಯೇಯ ಸಫಲಗೊಳಿಸಲು ದೂರಶಿಕ್ಷಣ ಮುಂದುವರಿಸಲಾಗುತ್ತಿದೆ. ವಿವಿಯ ಪ್ರಾಮಾಣಿಕ ಪ್ರಯತ್ನಕ್ಕೆ ಕೇಂದ್ರಗಳು ಗುಣಾತ್ಮಕವಾಗಿ ಸಹಕರಿಸಬೇಕು. ಪರೀಕ್ಷೆಯಲ್ಲಿ ನಕಲು ಆಗಬಾರದೆಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿರುವುದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿರಬಹುದು. ಕುಸಿತಕ್ಕೆ ಹಿಂಜರಿದು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಈ ನೀತಿಗೆ ಕೇಂದ್ರಗಳ ಸಂಯೋಜಕರು ಕಾಳಜಿಯಿಂದ ಜನತೆಗೆ ಪ್ರಚಾರ ನೀಡಿ ತಿಳಿವಳಿಕೆ ಕೊಡಬೇಕು. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಕಾರದೊಂದಿಗೆ ಕೆಲವು ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲಾಗುತ್ತದೆ ಎಂದರು.
ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸ್ವಾಗತಿಸಿದರು. ಉಪನಿರ್ದೇಶಕ ಡಾ. ಎಸ್.ಆರ್. ಚನ್ನವೀರಪ್ಪ ವಂದಿಸಿದರು.  ವಿದ್ಯಾರ್ಥಿ ಗುರುಸ್ವಾಮಿ ನಿರೂಪಿಸಿದರು. ಇದಕ್ಕೂ ಮುನ್ನ ದೂರಶಿಕ್ಷಣದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ. ವಿಜಯ್ ಪೂಣಚ್ಚ ತಂಬಂಡ, ಡಾ. ಎ. ಮೋಹನ್ ಕುಂಟಾರ್, ಡಾ. ಕೆ.ಎಂ. ಮೇತ್ರಿ, ಡಾ. ವಿಠಲರಾವ್ ಗಾಯಕ್‌ವಾಡ್ ದೂರಶಿಕ್ಷಣದ ಜಾಲವನ್ನು ಸಮರ್ಥವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರಗಳ ಸಂಯೋಜಕರೊಂದಿಗೆ ಚರ್ಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement