ಚಿಕಿತ್ಸೆ ಪಡೆದು ಕ್ಯಾನ್ಸರ್ ಮುಕ್ತರಾಗಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 4
ಕ್ಯಾನ್ಸರ್ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಎಲ್ಲ ರೋಗಗಳಿಗೂ ಚಿಕಿತ್ಸೆ ದೊರೆಯಲಿದೆ. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಆರೋಗ್ಯವಂತರಾಗಿ ಜೀವಿಸಬೇಕು ಎಂದು ಕ್ಯಾನ್ಸರ್ ರೋಗದಿಂದ ಗುಣಮುಖರಾದ ಮಾರೆಮ್ಮ ಹೇಳಿದರು.
ನಗರದ ವಿವೇಕಾನಂದ ಸರ್ಕಾರಿ ಹಿರಿಯ ಶಾಲೆಯಲ್ಲಿ ನಗರದ ಬಲ್ದೋಟ ಸಮೂಹದ ಎಂಎಸ್ಪಿಎಲ್ ಸಂಸ್ಥೆಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನನಗೆ ಗರ್ಭಕೋಶದ ಕ್ಯಾನ್ಸರ್ ಇದೆ ಎಂದು ತಿಳಿದಾಗ ಗಾಬರಿಯಾಗಿತ್ತು. ನಂತರ ಹುಬ್ಬಳ್ಳಿಗೆ ಹೋಗಿ ತೋರಿಸಿಕೊಂಡಾಗ, ಕ್ಯಾನ್ಸರ್ನ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಿದ್ದರಿಂದ ಶೀಘ್ರವೇ ಗುಣಮುಖರಾಗುತ್ತೀರೆಂದು ವೈದ್ಯರು ಭರವಸೆ ನೀಡಿದರು. ಮೂರು ವರ್ಷಗಳಿಂದ ನಾನು ಆರೋಗ್ಯದಿಂದ ಇದ್ದೇನೆ. ಕ್ಯಾನ್ಸರ್ ಬಗೆಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮುಂಬೈ ಕ್ಯಾನ್ಸರ್ ಸೊಸೈಟಿ ಸಂಸ್ಥೆಯ ಹಿರಿಯ ವೈದ್ಯ ಹಾಗೂ ಪ್ರಾಧ್ಯಾಪಕ ಡಾ. ರಮೇಶ್ ಕದಮ್ ಮಾತನಾಡಿ, ಕ್ಯಾನ್ಸರ್ ಮಾರಕ ಕಾಯಿಲೆಯಲ್ಲ. ಹಾಗೆಂದು ನಿರ್ಲಕ್ಷಿಸುವಂತೆಯೂ ಇಲ್ಲ. 30 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು 45 ವರ್ಷ ಮೇಲ್ಪಟ್ಟ ಪುರುಷರು ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ತಂಬಾಕು ಸೇವನೆ ಮಾಡುವವರಲ್ಲಿ ಮತ್ತು ಅತಿ ಹೆಚ್ಚು ಹೊಗೆಯುಗುಳುವ ಪ್ರದೇಶಗಳಲ್ಲಿ ಓಡಾಡುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ವಾಸವಿರುವ ಪ್ರತಿಯೊಬ್ಬರೂ ಒಮ್ಮೆ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ವಿವರಿಸಿದರು.
ಶಿಕ್ಷಕಿ ಕೋಮಲಾ ಮತ್ತು ಎಂಎಸ್ಪಿಎಲ್ ಸಂಸ್ಥೆಯ ಮಧು ಮಂಜುನಾಥ ಕ್ಯಾನ್ಸರ್ ಕುರಿತು ಮಾಹಿತಿ ಒದಗಿಸಿದರು.
ಎಂಎಸ್ಪಿಎಲ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಎ. ಬಲ್ದೋಟ, ಚಿತ್ರಾ ಎನ್. ಬಲ್ದೋಟ, ವಿವೇಕಾನಂದ ಶಾಲೆಯ ಮುಖ್ಯೋಪಾಧ್ಯಾಯ ವಿ. ಹನುಮಂತಪ್ಪ ಮತ್ತು ಶಿಕ್ಷಕರು ಹಾಗೂ ಎಂಎಸ್ಪಿಎಲ್ ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಪ್ರಥಮ ಬಾರಿಗೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ 456 ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 201 ಮಹಿಳೆಯರು ಮತ್ತು 255 ಪುರುಷರು ಸೇರಿದ್ದಾರೆ.
ಈ ಶಿಬಿರದಲ್ಲಿ ಮುಂಬೈನ ಖ್ಯಾತ ಕ್ಯಾನ್ಸರ್ ತಜ್ಞ ವೈದ್ಯರೂ ಸೇರಿ ಸುಮಾರು 22 ಸಿಬ್ಬಂದಿ ವರ್ಗದವರು, ಮೂರು ದಿನಗಳ ಕಾಲ ತಪಾಸಣೆ ನಡೆಸಲಿದ್ದಾರೆ.
ಪ್ರತಿದಿನ ಸುಮಾರು 150ರಿಂದ 160 ಫಲಾನುಭವಿಗಳಿಗೆ ತಪಾಸಣೆ ನಡೆಸಲಾಗುತ್ತದೆ. ಹೊಸಪೇಟೆ ನಗರ ಮತ್ತು ಎಂಎಸ್ಪಿಎಲ್ ಸಂಸ್ಥೆ ಅಳವಡಿಸಿಕೊಂಡಿರುವ 11 ಗ್ರಾಮಗಳ ನಿವಾಸಿಗಳು ಈ ಶಿಬಿರದಲ್ಲಿ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.