ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬದುಕಿನ ಅನುಭವ ಕಾವ್ಯಕ್ಕೆ ಪ್ರೇರಕ ಶಕ್ತಿ

Vishwanath S
Updated On : 5 Apr 2014, 11:05 am

ಕಂಪ್ಲಿ: ಬದುಕಿನ ಗಾಢ ಅನುಭವಗಳು ಕಾವ್ಯ ಕಟ್ಟುವಲ್ಲಿ ಪ್ರೇರಕವಾಗುತ್ತವೆ ಎಂದು ಸಾಹಿತಿ ಲಿಂಗಾರೆಡ್ಡಿ ಆಲೂರು ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಕಂಪ್ಲಿ ಸಿರಿಗನ್ನಡ ಬಳಗದ ಆಶ್ರಯದಲ್ಲಿ ಈಚೆಗೆ ಜರುಗಿದ ಕನ್ನಡ ಕಾವ್ಯ ಕಮ್ಮಟದಲ್ಲಿ ಕಾವ್ಯ ಮತ್ತು ಬದುಕು ಕುರಿತು ಉಪನ್ಯಾಸ ನೀಡಿದ ಅವರು, ಕವಿಗಳು ಸಹೃದಯಿಗಳಾಗಿರುತ್ತಾರೆ. ಯಾರಿಗೆ ಬದುಕನ್ನು ಸೂಕ್ಷ್ಮವಾಗಿ ಗಮನಿಸುವ, ಅವಲೋಕಿಸುವ ಕಲೆ ಗೊತ್ತಿರುತ್ತದೋ ಅವರು ಸಮರ್ಥ ಕವಿಯಾಗಿ ಹೊರಹೊಮ್ಮುತ್ತಾರೆ. ಜನಪದ ಕವಿಗಳು ತಮ್ಮ ಬದುಕಿನ ಗಾಢ ಅನುಭವಗಳನ್ನೆ ಕಾವ್ಯವಾಗಿ ಹೊಸೆದು ಹಾಡಿದರು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಎಂ. ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿರಿಗನ್ನಡ ಬಳಗದ ಅಧ್ಯಕ್ಷ ಆರ್. ರವೀಂದ್ರನಾಥ ಕಮ್ಮಟ ಉದ್ಘಾಟಿಸಿದರು. ಕನ್ನಡ ಉಪನ್ಯಾಸಕ ಸೋಮೇಶ ಉಪ್ಪಾರ, ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ರೋಹಿಣಿ ಮತ್ತು ಸಂಗಡಿಗರು ಹಚ್ಚೇವು ಕನ್ನಡದ ದೀಪ ಹಾಡು ಹಾಡಿ ಕನ್ನಡಾಭಿಮಾನ ಮೂಡಿಸಿದರು. ಉಪನ್ಯಾಸಕ ಹುಸೇನ್ ಸಾಬ್ ವಂದಿಸಿದರು. ಡಾ. ವಿಜಯಲಕ್ಷ್ಮಿ ಪಲೋಟಿ ನಿರೂಪಿಸಿದರು.
ಹೊಸ ತಲೆಮಾರಿನ ಕವಿಗಳು ಮತ್ತು ಸಾಮಾಜಿಕ ಬಿಕ್ಕಟ್ಟುಗಳು ಕುರಿತು ನಡೆದ ಗೋಷ್ಠಿಯಲ್ಲಿ ಡಾ. ಅರುಣ್ ಜೋಳದ ಕೂಡ್ಲಿಗಿ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ರುದ್ರಮ್ಮ ಹಾಸಿನಾಳ, ಎಂ. ಪದ್ಮಶ್ರೀ, ಶೈಫ್ ಜಾನ್ಸೆ ಕೊಟ್ಟೂರು, ಮಮತಾ ಮುಕುಂದಿಮಠ, ರುದ್ರಾಣಿ ಮುಕುಂದಿಮಠ, ಕಲ್ಗುಡಿ ರಾಜೇಶ್ವರಿ, ಡಾ. ಕೆ. ಮಲ್ಲಿಕಾರ್ಜುನ, ಡಾ. ಕೆ. ಮಂಜಪ್ಪ, ಭಾಗವಹಿಸಿದ್ದರು.
ಮಧ್ಯಾಹ್ನ ನಡೆದ ಕವಿಗೋಷ್ಠಿಯಲ್ಲಿ ಅಕ್ಕಿಬಸವೇಶ, ಬಂಗಿ ಮಂಜುನಾಥ, ಡಾ. ಗಿರಿಜಾ, ಕೆ. ರವಿಕುಮಾರ್, ಶಿವಕುಮಾರ್, ಕೆ. ಗುರುಮೂರ್ತಿ, ಲಲಿತಾ ಬಾವಿಕಟ್ಟಿ, ಶೈಫ್ ಜಾನ್ಸೆ ಕೊಟ್ಟೂರು, ಡಾ. ಅರುಣ್ ಜೋಳದ ಕೂಡ್ಲಿಗಿ, ಮಮತಾ ಮುಕುಂದಿಮಠ, ವಿದ್ಯಾರ್ಥಿ ಕೆ. ಗೋವಿಂದ ಕವನ ವಾಚನ ಮಾಡಿದರು. ಟಿ.ಎಂ. ಉಷಾರಾಣಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಎಂ. ಸೋಮೇಶ ಉಪ್ಪಾರ್, ಬಸವರಾಜ ನಿರ್ವಹಿಸಿದರು.
ಕನ್ನಡ ಕಾವ್ಯ ಪರಂಪರೆ ಕುರಿತು ಮಾತನಾಡಿ, ವ್ಯಕ್ತಿ ಆರಾಧನೆ ಸಾಹಿತ್ಯದೊಡನೆ ಬೀಜರೂಪವಾಗಿ ಬೆಳೆದು ಬಂದಿದೆ. ಎಲ್ಲ ಕಾಲಘಟ್ಟದ ಕವಿಗಳೂ ಇದರಿಂದ ಹೊರಬಂದಿಲ್ಲ, ಕವಿರಾಜಮಾರ್ಗಕಾರ, ಆದಿಕವಿ ಪಂಪ, ಹರಿಹರ, ವಚನಕಾರರು, ರಾಘವಾಂಕ ಸೇರಿದಂತೆ ಆಧುನಿಕ ಕಾಲಘಟ್ಟದಲಿಯೂ ಎಲ್ಲ ಕವಿಗಳು ವ್ಯಕ್ತಿ ಆರಾಧನೆಯಲ್ಲಿ ತೊಡಗಿದವರೆ, ದೇಜಗೌ ಅವರು ಕುವೆಂಪು ಅವರನ್ನು ದೈವತ್ವದ ಮಟ್ಟಕ್ಕೆ ಆರಾಧಿಸಿದರು ಎಂದರಲ್ಲದೇ ಆಧುನಿಕ ಕಾಲದ ಮಾಧ್ಯಮಗಳು ವ್ಯಕ್ತಿ ಆರಾಧನೆಯಲ್ಲಿ ತೊಡಗಿರುವುದಕ್ಕೆ ನಮ್ಮ ಸಾಹಿತ್ಯ ಪರಂಪರೆಗಳು ಪ್ರೇರಣೆ.
- ಡಾ. ಸತೀಶ್ ಪಾಟೀಲ್
ಹಗರಿಬೊಮ್ಮನಹಳ್ಳಿ ಸ.ಪ್ರ.ದ. ಕಾಲೇಜು ಉಪನ್ಯಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement