ಬಿಎಸ್‌ವೈ ಕೆಜೆಪಿ ಕಟ್ಟಿದ್ದರಿಂದ ಕೈಗೆ ಪಟ್ಟ
ಕೂಡ್ಲಿಗಿ: ಬಿಜೆಪಿ ತೊರೆದು ನಾನು ಬಿಎಸ್ಸಾರ್ ಕಾಂಗ್ರೆಸ್, ಬಿಎಸ್‌ವೈ ಕೆಜೆಪಿ ಕಟ್ಟಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿಗೆ ಮತ್ತೆ ತಾವು, ಯಡಿಯೂರಪ್ಪ ಹಿಂತಿರುಗಿದ್ದರಿಂದ ಬಿಜೆಪಿ ಸದೃಢವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಕಾಂಗ್ರೆಸ್ ಸೋಲಿಸುವುದು ಸುಲಭ ಎಂದು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಬಿಜೆಪಿ ಯುವ ಮುಖಂಡ ಬಂಗಾರಿ ಹನುಮಂತು ಅವರ ನಿವಾಸದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಬಳ್ಳಾರಿಗೆ ರಾಹುಲ್ ಗಾಂಧಿ ಬಂದರೆ ಜನರ ಮೇಲೆ ಪರಿಣಾಮ ಬೀರಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಜನತೆಗೆ ತಾತ್ಸಾರವಿದೆ. ಬಿಜೆಪಿ ಸರ್ಕಾರ, ತಾವು ಮಂತ್ರಿಯಾಗಿದ್ದಾಗ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ತಾವು ಸ್ವಾರ್ಥಕ್ಕಾಗಿ ರಾಜಕೀಯ ಮಾಡಿಲ್ಲ ಎಂಬುದು ಜಿಲ್ಲೆ ಪ್ರಜ್ಞಾವಂತ ಮತದಾರರಿಗೆ ತಿಳಿದಿದೆ. ಈ ಬಾರಿ ಜಿಲ್ಲೆ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ. 30 ವರ್ಷ ರಾಜಕೀಯ ಅನುಭವ, ಬಿಜೆಪಿಯಲ್ಲಿ ಎಸ್ಟಿ ಜನಾಂಗದವರಲ್ಲಿ ಹಿರಿಯರಾದ ತಮಗೆ ಯಾವ ರೀತಿ ರಾಜಕೀಯ ಮಾಡಬೇಕೆಂಬುದು ಗೊತ್ತಿದೆ ಎಂದು ತಮ್ಮನ್ನು ಟೀಕಿಸುವವರಿಗೆ ತಿರುಗೇಟು ನೀಡಿದರು.
ಕೂಡ್ಲಿಗಿ, ಕಂಪ್ಲಿ, ಹೊಸಪೇಟೆ ಶಾಸಕರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಾದರೂ ಅವರೆಲ್ಲರ ಬೆಂಬಲ ತಮಗಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಳ್ಳಾರಿ ಸೇರಿದಂತೆ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಜಯದ ನಗೆ ಬೀರಲಿದೆ.
ಜಿ. ಉಮೇಶ್, ಜೆ.ಸಿ. ಶಶಿಧರ, ಕೆ.ಎಚ್. ವೀರನಗೌಡ, ಕೆ.ಎಂ. ತಿಪ್ಪೇಸ್ವಾಮಿ, ಅಮೃತಮ್ಮ, ಸಿ. ರೇವಣಸಿದ್ದಪ್ಪ, ಕನಿಕೇರಿ ನಾಗರಾಜ, ಗೋವರ್ಧನ, ಪೆಟ್ರೋಲ್ ಬಂಕ್ ನಿಂಗಪ್ಪ, ಮುನ್ನಾ, ಪ್ರಕಾಶ್, ಕೋಲೇ ಉಸ್ಮಾನ್, ಬಳಗೇರ ಹನುಮಂತಪ್ಪ, ಗುಪ್ಪಾಲ್ ರಾಘವೇಂದ್ರ, ಕುಪ್ಪಿನಕೇರಿ ವೆಂಕಟೇಶ್, ಗಣಾಚಾರಿ ನಾಗರಾಜ, ಬಂಗಾರಿ ಮಂಜುನಾಥ ಇತರರಿದ್ದರು.
ನಾಗೇಂದ್ರ ಅನುಪಸ್ಥಿತಿಗೆ ಬೇಸರ
ಕೂಡ್ಲಿಗಿ: ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ಶಾಸಕ ಬಿ. ನಾಗೇಂದ್ರ ಅನುಪಸ್ಥಿತಿ ಈ ಚುನಾವಣೆಯಲ್ಲಿ ಬೇಸರ ತರಿಸಿದ್ದರೂ ಅವರು ಸದಾ ತಮ್ಮ ಬೆಂಬಲಕ್ಕಿರುವುದು ಹೆಚ್ಚಿನ ಬಲ ನೀಡಿದೆ ಎಂದು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ತಾಲೂಕಿನ ಬಡೇಲಡುಕು ಗ್ರಾಮದಲ್ಲಿ ಶುಕ್ರವಾರ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕ ಬಿ. ನಾಗೇಂದ್ರ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಲೇ ಅವರನ್ನು ಮತದಾರರು ಎರಡನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಅಪಾರ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದು, ಜಿಲ್ಲೆಯಲ್ಲೂ ಬಿಜೆಪಿ ಅಲೆ ಜೋರಾಗಿ ಬೀಸುತ್ತಿದೆ. ಜನತೆ ಸಹ ಪ್ರಚಾರದಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರವಧಿಯಲ್ಲಿ ಅಗತ್ಯ ವಸ್ತುಗಳು, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಜನರಿಗೆ ಉಪಯುಕ್ತ ಯೋಜನೆ ಜಾರಿಯಲ್ಲಿ ವಿಫರಾದ ಪ್ರಧಾನಿ ಮನಮೋಹನ್ ಸಿಂಗ್‌ರಿಂದ ದೇಶಕ್ಕೆ ರಕ್ಷಣೆ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಯುಪಿಎ ಸರ್ಕಾರ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಾ ಮತ ಕೇಳುತ್ತಿರುವುದು ಹಾಸ್ಯಾಸ್ಪದ. ದೇಶದ ರಕ್ಷಣೆ, ಅಭಿವೃದ್ಧಿಗೆ ನರೇಂದ್ರ ಮೋದಿ ಅವಶ್ಯ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಬಿಜೆಪಿ ಅಧಿಕಾರ ಹಿಡಿಯುತ್ತದೆ. ತಮಗೆ ಜನರಿಂದ ಹೆಚ್ಚಿನ ಬೆಂಬಲ ಸಿಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಜಿಪಂ ಮಾಜಿ ಸದಸ್ಯ ಮೊರಬ ಶಿವಣ್ಣ, ಬಡೇಲಡುಕು ಶ್ರೀನಿವಾಸ ಮಾತನಾಡಿದರು. ಜಿಪಂ ಸದಸ್ಯರಾದ ಸಾವಿತ್ರಮ್ಮ, ಪಿ. ಚನ್ನಬಸವನಗೌಡ, ಮೀನಾಕ್ಷಮ್ಮ, ತಿಪ್ಪೇಸ್ವಾಮಿ, ಯು. ಚನ್ನಮ್ಮ ನಿಂಗಪ್ಪ, ಬಡಲಡಕು ನಿಂಗಪ್ಪ, ಕೆ.ಎಚ್. ವೀರನಗೌಡ, ಜೆ.ಸಿ. ಶಶಿಧರ, ನಾಗಣ್ಣ, ಎಸ್. ನಾಗರಾಜ, ಬಿ. ಭೀಮೇಶ್, ಕೆ.ಕೆ. ಹಟ್ಟಿ ವೀರಣ್ಣ, ಜಿ. ಉಮೇಶ್, ಕೆ.ಎಂ. ತಿಪ್ಪೇಸ್ವಾಮಿ, ಬಡೇಲಡಕು ಸತೀಶ್, ಸೂರ್ಯಪಾಪಣ್ಣ, ಪಿ. ಮಂಜುನಾಥ ನಾಯಕ, ಗೋವರ್ಧನ ರೆಡ್ಡಿ, ಪ್ರಭು ಯಾದವ್, ಕುಪ್ಪಿನಕೆರೆ ವೆಂಕಟೇಶ್, ಇತರರಿದ್ದರು. ಸಂಜೆ ಪಟ್ಟಣದಲ್ಲಿ ಬಿ. ಶ್ರೀರಾಮುಲು ರೋಡ್ ಶೋ ನಡೆಸಿ ಮತ ಯಾಚಿಸಿದರು.