ರೆಡ್ಡಿ ಸೋದರರು, ಬಿಎಸ್‌ವೈ ಲೂಟಿಕೋರರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 4
ಜನಾರ್ದನ ರೆಡ್ಡಿ, ಯಡಿಯೂರಪ್ಪ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಅಕ್ರಮ ಗಣಿಗಾರಿಕೆಯಿಂದ ರು. 1 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀರಾಮುಲು ಮೇಲೆ ತನಿಖೆ ತೂಗುಕತ್ತಿ
ಅಕ್ರಮ ಗಣಿಗಾರಿಕೆಯಿಂದ ಬಂದ ಹಣವನ್ನು ಬಿಎಸ್ಸಾರ್ ಕಾಂಗ್ರೆಸ್‌ಗೆ ಖರ್ಚು ಮಾಡಿದ್ದಾರೆ. ಆ ಪಕ್ಷದ ಮಾಸ್ಟರ್ ಬ್ರೇನ್ ಜನಾರ್ದನ ರೆಡ್ಡಿ. ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋಗಿರುವ ಜನಾರ್ದನ ರೆಡ್ಡಿ ಹೊರಗಡೆ ಬರಲು ಸಾಧ್ಯವಿಲ್ಲ. ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಮೇಲೂ ತನಿಖೆ ತೂಗು ಕತ್ತಿ ನೇತಾಡುತ್ತಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಬಿಜೆಪಿಯವರು ಐದೇ ವರ್ಷಗಳಲ್ಲಿ ಆಡಳಿತ ಹಾಳು ಮಾಡಿದ್ದರು. ನೈಸರ್ಗಿಕ ಸಂಪತ್ತು ಲೂಟಿ, ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಈಗ ಸುಧಾರಣೆ ಮಾಡಿದ್ದೇವೆ. ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪನೆಯಾಗಿದೆ. ಹೀಗಾಗಿ, ರಾಜ್ಯಾದ್ಯಂತ ಏಕಕಾಲದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬಿಜೆಪಿಯದು ಕೋಮುವಾದ, ಏಕನಾಯಕತ್ವ, ಏಕ ಸಂಸ್ಕೃತಿ ಪ್ರತಿಪಾದನೆ ಮಾಡಿದರೆ, ಕಾಂಗ್ರೆಸ್ ಜಾತ್ಯತೀತ, ಬಹು ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದೆ. ದೇಶದ ಜನರ ಒಗ್ಗಟ್ಟು ಕಾಂಗ್ರೆಸ್‌ನಿಂದ ಮಾತ್ರ. ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಬೇಕೆಂದರು.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿ ಇಟ್ಟುಕೊಂಡು ಜನರ ಮುಂದೆ ಓಟು ಕೇಳುತ್ತಿದೆ. ಆದರೆ, ನರೇಂದ್ರ ಮೋದಿಗೆ ಅಭಿವೃದ್ಧಿ ಹಿನ್ನೆಲೆ ಇಲ್ಲ, ಕಾಂಗ್ರೆಸ್‌ನ್ನು ಟೀಕೆ ಮಾಡುವ ಹಿನ್ನೆಲೆ ಇಟ್ಟುಕೊಂಡು ಮತ ಕೇಳುತ್ತಾರೆ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನರೇಂದ್ರ ಮೋದಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಲ್ಲ, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್, ಶಾಸಕರಾದ ಅನಿಲ್ ಲಾಡ್, ಎಂ.ಪಿ. ರವೀಂದ್ರ, ಜಿಲ್ಲಾ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಆಂಜನೇಯಲು ವೇದಿಕೆಯದ್ದರು. ಲೋಕಸಭಾ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಉಪಸ್ಥಿತರಿದ್ದರು.
ಕಚ್ಚಾಡಿದವರು ಒಂದಾಗಿದ್ದಾರೆ
ಬೀದಿನಾಯಿಗಳಂತೆ ಕಚ್ಚಾಡಿದವರೀಗ ಒಂದಾಗಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಜನಾರ್ದನ ರೆಡ್ಡಿ ಅವರನ್ನು ಜೈಲಿನಿಂದ ಹೊರಗೆ ತರಬಹುದು ಎಂಬುದಕ್ಕಾಗಿ ಶ್ರೀರಾಮುಲು ಬಿಜೆಪಿಗೆ ಬಂದಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವುದಿಲ್ಲ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುವುದಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಜಾರಿಗೆ ಬಂದು, ರಾಹುಲ್‌ಗಾಂಧಿ ಅವರು ಪ್ರಧಾನಮಂತ್ರಿ ಆಗಲಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಮೊದಲ ಬಾರಿಗೆ ಸಿದ್ದು ಭೇಟಿ
ಸಿದ್ದರಾಮಯ್ಯ ಸಿಎಂ ಆದಾಗಿನಿಂದಲೂ ಬಳ್ಳಾರಿಗೆ ಬಂದಿರಲಿಲ್ಲ. ಇಲ್ಲಿನ ಫುಟ್‌ಬಾಲ್ ಕ್ರೀಡಾಂಗಣ, ಹಲವು ಕಟ್ಟಡ, ಕಾಮಗಾರಿಗಳನ್ನು ಅವರೇ ಉದ್ಘಾಟಿಸಬೇಕೆಂದು ಕಾದು ಕುಳಿತರೂ ಬರಲಿಲ್ಲ. ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಳ್ಳಾರಿಗೆ ಬಂದಿದ್ದರಿಂದ ಸಿಎಂ ಆದ ಬಳಿಕ ಪ್ರಥಮ ಬಾರಿಗೆ ಸಿದ್ದರಾಮಯ್ಯ ನಗರಕ್ಕೆ ಆಗಮಿಸಿದ್ದಾರೆ.