ಶಿಸ್ತು, ಸಂಯಮವಿರಲಿ: ಡಾ. ಎಚ್. ರಾಮಕೃಷ್ಣ ಸಲಹೆ
ಬಳ್ಳಾರಿ: ಶಿಸ್ತು, ಸಂಯಮ, ಸಮುದಾಯ ಜೀವನ ನೀಡುವ ಪ್ರಮುಖ ಗುಣವನ್ನು ಎನ್ನೆಸ್ಸೆಸ್ ಹೊಂದಿದ್ದು, ವಿದ್ಯಾರ್ಥಿಗಳು ಪಡೆದುಕೊಂಡು ದೇಶದ ಸತ್ಪ್ರಜೆಗಳಾಬೇಕೆಂದು ಸ್ಥಳೀಯ ವಿಎಸ್ಕೆ ವಿವಿ ಎನ್ನೆಸ್ಸೆಸ್ ಸಂಯೋಜಕ ಡಾ. ಎಚ್. ರಾಮಕೃಷ್ಣ ಸಲಹೆ ನೀಡಿದರು.
ಇಲ್ಲಿನ ಜಾಗೃತಿ ನಗರದಲ್ಲಿ ಗಾಲಿ ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ನೆಸ್ಸೆಸ್ ಎ ಮತ್ತು ಬಿ ಘಟಕಗಳಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎನ್ನೆಸ್ಸೆಸ್ ಎಂದರೆ ಕೇವಲ ಶ್ರಮದಾನವಲ್ಲ. ವಿನೂತನ ಪರಿಕಲ್ಪನೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ, ತನ್ನ ಪ್ರತಿಭೆ ಹೊರಸೂಸಲು ಎಲ್ಲ ಅವಶ್ಯಕ ವೇದಿಕೆ ಒದಗಿಸಲಿದೆ. ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಗುಣಗಳನ್ನು ಹೊಂದಿ ದೇಶದ ಏಳ್ಗೆಗಾಗಿ ಶ್ರಮಿಸಲು ಈ ಶಿಬಿರ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಬಲೀಕರಣಗೊಳ್ಳಬೇಕು. ಬಳ್ಳಾರಿಯು ನಾಲ್ಕೈದು ಜಿಲ್ಲೆಗಳ ಜತೆಗೆ ಗಡಿಭಾಗ ಹೊಂದಿದ್ದು, ದ್ವಿಭಾಷಿಗರ ಗಡಿಗೆ ಅಂಟಿರುವುದರಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಏರ್ಪಡಿಸುವ ಮನೋಭಾವನೆ ಹೊಂದಿದ್ದೇನೆಂದು ತಿಳಿಸಿದರು.
ಪ್ರಭಾರಿ ಪ್ರಾಚಾರ್ಯರಾದ ಮೋನಿಕಾರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ, ಶ್ವೇತಾ ಎನ್ಎಸ್ಎಸ್ ಗೀತೆ ಹಾಡಿದರು. ಎನ್ಎಸ್ಎಸ್ ಅಧಿಕಾರಿ ಮುರಳೀಶಂಕರಗೌಡ ಸ್ವಾಗತಿಸಿದರು. ಎಂ. ಸೋಮಶೇಖರ್ ನಿರೂಪಿಸಿದರು. ಡಾ. ರಾಚಪ್ಪ ವಂದಿಸಿದರು.