ಶ್ರೀರಾಮುಲು ವಾಲ್ಮೀಕಿ ಸಮಾಜದ ನಾಯಕರಲ್ಲ
ಕೂಡ್ಲಿಗಿ: ವಾಲ್ಮೀಕಿ ಜನಾಂಗ ಹೆಸರು ಹೇಳಿ ಆ ಜನಾಂಗದ ಅಭಿವೃದ್ಧಿಗೆ ಶ್ರಮಿಸದೆ ದೂರವುಳಿದ, ರೆಡ್ಡಿಗಳ ಜತೆ ಹೆಲಿಕಾಪ್ಟರ್‌ನಲ್ಲಿ ತಿರುಗಿದ ಶ್ರೀರಾಮುಲು ಹೇಗೆ ವಾಲ್ಮೀಕಿ ಸಮಾಜ ನಾಯಕರಾಗುತ್ತಾರೆಂದು ಬಳ್ಳಾರಿ ಆಪ್ ಅಭ್ಯರ್ಥಿ ಶಿವಕುಮಾರ ಮಾಳಗಿ ಪ್ರಶ್ನಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜಯಂತಿ ಆಚರಣೆ ಜಾರಿಗೆ ಶ್ರಮಿಸಿದ್ದು ಸಾಧನೆಯಲ್ಲ. ಅಧಿಕಾರದಲ್ಲಿದ್ದಾಗಲೂ ವಾಲ್ಮೀಕಿ ಸಮುದಾಯದವರ ಮಕ್ಕಳ ಶಿಕ್ಷಣ, ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾದ ಶ್ರೀರಾಮುಲು ವಾಲ್ಮೀಕಿ ಸಮುದಾಯ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಬಲಿಷ್ಠರಾಗಿದ್ದು, ಅವರು ಬುಡಕಟ್ಟು ಅಲ್ಲ. ರೈತರ ಕುಟುಂಬದ ಬುಡಕಟ್ಟು (ವಾಲ್ಮೀಕಿ) ಜನಾಂಗದ ತಾವು ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ ಎಂದು ಮಾಳಗಿ ಹೇಳಿದರು.
ಶ್ರೀರಾಮುಲು ಜನನಾಯಕರಾದರೆ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ. ಜನಾರ್ದನ ರೆಡ್ಡಿ ನಡೆಸಿದ ಅಕ್ರಮ ಗಣಿಗಾರಿಕೆ ಪಾತ್ರದಲ್ಲಿ ಶ್ರೀರಾಮುಲು ಎಷ್ಟು ನಿಷ್ಠರೆನ್ನುವುದು ಜನರಿಗೆ ತಿಳಿದಿದೆ. ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಮತದಾರರು ಸಾತ್ವಿಕ ಅಭ್ಯರ್ಥಿಗಳಿಗೆ ಮತ ಹಾಕಿ. ಆ ಬಾರಿ ಮತದಾರ ಆಪ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾನೆ ಎಂದರು.
ಬಿ. ನಾಗೇಂದ್ರ ಕೂಡ್ಲಿಗಿ ಶಾಸಕರಾದ ಮೇಲೆ ಇಲ್ಲಿನ ಮ್ಯಾಸಬೇಡ ಶ್ರೀಮಂತ ಸಂಸ್ಕೃತಿಯನ್ನು ಹಣದಿಂದ ಖರೀದಿಸುವಂತೆ ಮಾಡಿದ್ದು ದುರಂತ. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿದ್ದಾರೆಂದು ಆರೋಪಿಸಿದರು.
ಸ್ಥಳೀಯ ಗಾಂಧೀಜಿ ಪವಿತ್ರ ಚಿತಾಭಸ್ಮ ಸ್ಮಾರಕಕ್ಕೆ ನಮನ ಸಲ್ಲಿಸಿ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಜನಸಂಗ್ರಾಮ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಡೂರು ಟಿ.ಎಂ. ಶಿವಕುಮಾರ್, ವಕೀಲ ಕೊಟ್ಟೂರು ಬಾಷಾ, ಸಿದ್ದನಗೌಡ ಇತರರಿದ್ದರು.