ಖಚಿತ ಭರವಸೆ ಸಿಕ್ಕರೆ ಬಹಿಷ್ಕಾರ ಹಿಂದಕ್ಕೆ
ಹಗರಿಬೊಮ್ಮನಹಳ್ಳಿ: ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ವಿಚಾರ ರಾಜಕಾರಣಿಗಳ ಕೈಯಲ್ಲಿನ ಆಟದ ಬೊಂಬೆಯಾಗಿದೆ. ಪ್ರತಿ ಚುನಾವಣೆ ಸಮಯದಲ್ಲಿ ಭರವಸೆ ನೀಡಿ, ನಮ್ಮನ್ನು ನಾಲ್ಕು ದಶಕಗಳಿಂದ ಮೂರ್ಖರನ್ನಾಗಿಸಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳೇ ಖುದ್ದು ನಮ್ಮ ಗ್ರಾಮಕ್ಕೆ ಆಗಮಿಸಿ ಶಾಶ್ವತ ನೀರೊದಗಿಸುವ ಕುರಿತು ಖಚಿತ ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೆ ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಉಲುವತ್ತಿ ಗ್ರಾಮಸ್ಥರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಯಾಗುವರೆಗೂ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡ ಹಿನ್ನೆಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೇತ ಇಡಿ ತಾಲೂಕು ಆಡಳಿತವೇ ಉಲುವತ್ತಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಶ್ರೀಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಗ್ರಾಮಸ್ಥರನ್ನು ಮನವೋಲಿಸಲು ಮುಂದಾಯಿತು. ಆದರೆ, ಗ್ರಾಮಸ್ಥರು ಮಾತ್ರ ಅಧಿಕಾರಿಗಳ ಯಾವುದೇ ಮಾತಿಗೂ ಮಣಿಯಲಿಲ್ಲ.
ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಸಹಾಯಕ ಚುನಾವಣಾಧಿಕಾರಿ ನಾರಾಯಣಗೌಡರು ಮಾತನಾಡಿ, ಮತದಾನ ನಿಮ್ಮ ಮೂಲಭೂತ ಹಕ್ಕು ಅದನ್ನು ಕಡ್ಡಾಯವಾಗಿ ಚಲಾಯಿಸಬೇಕು. ನಿಮ್ಮ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈಗ ಚುನಾವಣೆ ಸಮಯವಾಗಿದ್ದು ಹಾಗೂ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದು ಚರ್ಚೆ ಮಾಡಲು ಸಮಯವಲ್ಲ. ಅಲ್ಲದೆ ಯಾವುದೇ ಅಶ್ವಾಸನೆ ನೀಡಲು ಬರದ ಪರಿಸ್ಥಿತಿ ಇದೆ. ಆದ್ದರಿಂದ ನೀವು ಮತದಾನದಲ್ಲಿ ಭಾಗಿಯಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡರು. ಈ ಮನವಿಗೆ ಗ್ರಾಮಸ್ಥರು ಪ್ರತಿಕ್ರಿಯಿಸಿ, ನಾವು ಈಗಾಗಲೆ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಮಾನಸಿಕವಾಗಿ ಗಟ್ಟಿಯಾಗಿದ್ದೇವೆ. ನೀವು ಎಷ್ಟೆ ಹೇಳಿದರೂ ಖಚಿತ ಭರವಸೆ ಸಿಗುವರೆಗೆ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು. ಹೀಗಾಗಿ ತಾಲೂಕು ಆಡಳಿತ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗ್ರಾಮದಿಂದ ಕಾಲ್ತೇಗೆಯಿತು.
ಗ್ರಾಮದ ಮುಖಂಡರಾದ ಕರಡಿ ರಾಮಣ್ಣ, ಶರಣಪ್ಪ, ಮರಡಿ ವೆಂಕಟೇಶ, ಕಡ್ಲಿ ಶಿವಪ್ಪ, ಹಂಪಾಸಾಗರ ವಿರೂಪಾಕ್ಷ, ತಳವಾರ ವೆಂಕಟೇಶ್, ಡಿ. ಪ್ರಕಾಶ, ಸುಲೇಮಾನ್ ಸಾಬ್, ರೈತ ಮುಖಂಡರಾದ ಅಡಿವೆಪ್ಪ, ಕಡ್ಲಬಾಳು ಶರಣಪ್ಪ, ಮಾಬುಸಾಬ್, ಸಹಾಯಕ ಚುನಾವಣಾಧಿಕಾರಿ ನಾರಾಯಣಗೌಡ, ತಹಸೀಲ್ದಾರ್ ಸಾಲಿವಾಲೆ ತಿಪ್ಪಣ್ಣ, ಕಾರ್ಯನಿರ್ವಾಹಕ ಅಧಿಕಾರಿ ಬಿಎಂಎಸ್ ವೀರಯ್ಯ, ಪ್ಲೇಯಿಂಗ್ ಸ್ಕಾಡ್ ಮುಖ್ಯಸ್ಥ ಸಿದ್ದೇಶ್ವರ, ಯೋಜನಾಧಿಕಾರಿ ಅನ್ನದಾನಯ್ಯ, ಕಂದಾಯ ನೀರಿಕ್ಷಕ ಪ್ರತಿಭಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.