ನರಹಂತಕ ಮನೋಭಾವದವರು ಕೈಗೆ ಬೇಡ
ಕೊಟ್ಟೂರು: ಮಾಜಿ ಶಾಸಕ ಶಿರಾಜ್ ಶೇಖ್ ಬಳ್ಳಾರಿ ಜಿಲ್ಲೆಯ ನರೇಂದ್ರ ಮೋದಿ. ಮೋದಿಯಂತಹ ನರಹಂತಕ ಮನೋಭಾವನೆಯವರು ಕಾಂಗ್ರೆಸನ್ನು ಸಂಹಾರ ಮಾಡುತ್ತಾರೆಯೇ ಹೊರತೂ ಕಾಂಗ್ರೆಸ್ಸಿನ ಯಶಸ್ಸಿಗೆ ಖಂಡಿತ ಶ್ರಮಿಸಲಾರರು. ಪಕ್ಷಕ್ಕೆ ಅಂಥವರು ಬೇಕಾಗಿಲ್ಲ. ಆದರೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಜಿಲ್ಲೆಯ ಹಿರಿಯ ನಾಯಕರೊಬ್ಬರು ಪ್ರಯತ್ನಿಸುತ್ತಿರುವುದು ತರವಲ್ಲ ಎಂದು ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಭಾನುವಾರ ರಾತ್ರಿ ಪಟ್ಟಣದಲ್ಲಿ ಕೆಪಿಸಿಸಿ ಸದಸ್ಯ ಕೋಗಳಿ ಸಿದ್ದಲಿಂಗನಗೌಡರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಜ್ ಶೇಖ್ ಬಿಎಸ್ಆರ್ ಸೇರಿಕೊಂಡು, ಕಾಂಗ್ರೆಸ್ ಆಡಳಿತವಿದ್ದ ಜಿಪಂ ಚಿತ್ರಣ ಬದಲಾಯಿಸಿದರು. ಅಂಥವರು ಕಾಂಗ್ರೆಸ್ಗೆ ಬರುವುದು ಯಾರಿಗೂ ಇಷ್ಟವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಈಗಾಗಲೇ ಶಿರಾಜ್ ಶೇಖ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಆದರೂ ಶೇಖ್ ಕಾಂಗ್ರೆಸ್ಗೆ ಬರುವ ಪ್ರಯತ್ನ ನಡೆಸಿದ್ದಾರೆ. ತಮ್ಮ ವಿರೋಧದ ನಡುವೆಯೂ ಅವರನ್ನು ಸೇರ್ಪಡೆ ಮಾಡಿಕೊಂಡರೆ ತಾವೇನು ಮಾಡಲು ಬರುವುದಿಲ್ಲ, ವಿರೋಧವಂತೂ ಇದ್ದೇ ಇದೆ ಎಂದರು. ಶಿರಾಜ್ ಶೇಖ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರೆ ತಮ್ಮ ನಿಲುವು ಬದಲಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಎಂ.ಪಿ. ರವೀಂದ್ರ ಹೇಳಿದ್ದಾರೆ. ಆದರೆ ಅದು ಆತುರದ ಮಾತು. ತಾವು ಅಂತಹ ಕ್ರಿಯೆಗೆ ಮುಂದಾಗುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ಗೆ ಬಿಡುವೆ ಎಂದು ಲಾಡ್ ಹೇಳಿದರು. ಎನ್.ವೈ ಹನುಮಂತಪ್ಪ ಅವರ ಗೆಲುವು ನಿಶ್ಚಿತ. ಜಿಲ್ಲೆಯ ಕಾಂಗ್ರೆಸ್ ಮುಖಂಡರ ಭಿನ್ನಾಭಿಪ್ರಾಯ ಗೆಲುವಿಗೆ ಅಡ್ಡಿಯಾಗುವುದೇ ಇಲ್ಲ. ಮುಖಂಡರ ಅಭಿಪ್ರಾಯ ಬೇರೆ ಇದೆಯೇ ಹೊರತು ಎಲ್ಲರೂ ಹನುಮಂತಪ್ಪ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಅನಿಲ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಪಿ.ಎಚ್. ದೊಡ್ಡರಾಮಣ್ಣ, ಕೆಪಿಸಿಸಿ ಸದಸ್ಯರಾದ ಸಿದ್ದಲಿಂಗನಗೌಡ, ಕೃಷ್ಣನಾಯ್ಕ, ಮುಟುಗನಹಳ್ಳಿ ಕೊಟ್ರೇಶ್, ಎ.ಎಂ. ಗುರುಪ್ರಸಾದ್, ಪರಮೇಶ್ವರಯ್ಯ, ಮುಖೇಶ್ ಇದ್ದರು.