ಆಪ್ತಮಿತ್ರನ ಬಿಡುಗಡೆಗೆ ಶ್ರೀರಾಮುಲು ಸ್ಪರ್ಧೆ
ಹೂವಿನಹಡಗಲಿ: ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಸ್ಪರ್ಧಿಸಿದ್ದು ಬಳ್ಳಾರಿ ಜಿಲ್ಲೆ ಉದ್ಧಾರಕ್ಕಲ್ಲ, ಅವರ ಆಪ್ತಮಿತ್ರ ಸೇರಿ 4 ಕಳ್ಳರ ಬಿಡುಗಡೆಗಾಗಿ ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.
ತಾಲೂಕಿನ ಇಟ್ಟಿಗಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಮತ ಯಾಚಿಸಿದ ಅವರು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಕನಸು ಕಾಣುವ ಶ್ರೀರಾಮುಲು ಹೊಸಪೇಟೆ, ಕಂಪ್ಲಿ, ಕೂಡ್ಲಿಗಿ, ಅವರ ಆಪ್ತಮಿತ್ರ ಜನಾರ್ದನ ರೆಡ್ಡಿ ಎಂಬ ಗಣಿಗಳ್ಳರನ್ನು ಬಿಡುಗಡೆಗೆ ಸ್ಪರ್ಧಿಸಿದ್ದಾರೆ. ಕೇಂದ್ರದಲ್ಲಿ ಯುಪಿಎ ಮತ್ತೆ ಸರ್ಕಾರ ರಚಿಸುತ್ತದೆ. ಈ ನಾಲ್ವರಿಗೆ ಜೈಲು ವಾಸವೇ ಗತಿ. ಇವರನ್ನು ಜೈಲಿನಿಂದ ಬಿಡಿಸಿ ಅವರು ಮತ್ತಷ್ಟು ಲೂಟಿ ಮಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ರಸ್ತೆ ತಗ್ಗು-ಗುಂಡಿಗಳಿಗೆ ಮಣ್ಣು ಹಾಕಲಿಲ್ಲ. ಅಂದಿನ ಶಾಸಕರು ಅರೆಬರೆ ಸಿಂಗಟಾಲೂರು ಕಾಮಗಾರಿ ಮಾಡಿ ತರಾತುರಿಯಲ್ಲಿ ಯೋಜನೆ ಉದ್ಘಾಟಿಸಿದರು. ತಾಲೂಕಿನ 11 ಕೆರೆಗಳಿಗೆ ನೀರು ಭರ್ತಿಗೆ ಅನುದಾನ ಬಿಡುಗಡೆಯಾಗಿದ್ದು, ಚುನಾವಣೆ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ಮತವೊಂದಕ್ಕೆ ರು. 200 ನೀಡಲು ಅಕ್ರಮ ಹಣ ಸಂಗ್ರಹಿಸಿದ್ದಾರೆ. ಅದನ್ನು ಪಡೆದು ಮಜಾ ಮಾಡಿ, ಕಾಂಗ್ರೆಸ್‌ಗೆ ಮತ ಹಾಕಿ. ಕಳ್ಳರ ಹಣ ತಿನ್ನುವುದು ಪಾಪವಲ್ಲ. ಸಂಸದೆ ಜೆ. ಶಾಂತಾ ಜನರ ನಿರೀಕ್ಷೆ ಹುಸಿಗೊಳಿಸಿ ಬಳ್ಳಾರಿಯಲ್ಲೇ ಕಾಲ ಕಳೆದರು. ಬಂದ ಅನುದಾನ ಬಳಸದೆ ಡಿಸಿ ಕಚೇರಿಯಲ್ಲಿ ಕೊಳೆಯುತ್ತಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಹರಪನಹಳ್ಳಿಯ ಗರ್ಭಗುಡಿ ಏತ ನೀರಾವರಿ ಯೋಜನೆಗೆ ನೀರಾವರಿ ನಿಗಮದಲ್ಲಿ ಹಣವಿದ್ದರೂ ಅಗತ್ಯ ನೀರು ನಿಗದಿಯಾಗದೆ ಯೋಜನೆಗೆ ಹಿನ್ನಡೆಯಾಗಿದೆ. ಇದಕ್ಕೆ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ನಿರ್ಲಕ್ಷ್ಯ ಕಾರಣ ಎಂದರು.
ಐಗೋಳ್ ಚಿದಾನಂದ, ನಂದಿಹಳ್ಳಿ ಹಾಲಪ್ಪ, ಚಾಂದ್‌ಸಾಬ್, ಎನ್.ವೈ. ಹನುಮಂತಪ್ಪ ಮಾತನಾಡಿದರು. ಎಂ. ಪರಮೇಶ್ವರಪ್ಪ, ಅಟವಾಳಿಗಿ ಕೊಟ್ರೇಶ, ವಾರದ ಗೌಸ್ ಮೊಹಿದ್ದೀನ್, ಅಜಯ್, ಅರವಳ್ಳಿ ವೀರಣ್ಣ, ಲಕ್ಷ್ಮೀ ಇತರರು ಇದ್ದರು.