ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೈಗಿಲ್ಲ ಗೋಲ್‌ಕೀಪರ್, ಕ್ಯಾಪ್ಟನ್

Mainashree
Updated On : 10 Apr 2014, 10:06 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 9
ಗೋಲ್‌ಕೀಪರ್, ಕ್ಯಾಪ್ಟನ್ ಇಲ್ಲದ ದಯನೀಯ ಸ್ಥಿತಿ ಕಾಂಗ್ರೆಸ್‌ನದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದರೆ, ರಾಜ್ಯ ಸರ್ಕಾರ ಬದುಕಿದ್ದೂ ಸತ್ತಂತೆ. ದೇಶದಲ್ಲಿ ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 70ರಿಂದ 80 ಸ್ಥಾನ ಸಿಗಬಹುದಷ್ಟೇ ಎಂದರು.
ರಾಜ್ಯದಲ್ಲಿ ತಮ್ಮ ಸರ್ಕಾರವಿದ್ದಾಗ ಬಜೆಟ್ ಗಾತ್ರ ರು. 36 ಸಾವಿರ ಕೋಟಿಯಿಂದ ರು. 1.16 ಲಕ್ಷ ಕೋಟಿಗೆ ಏರಿತು. ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದೆವು. ದುಷ್ಟಶಕ್ತಿಗಳ ಸಂಹಾರಕ್ಕೆ ಈ ಬಾರಿ ಬಿಜೆಪಿ ಗೆಲ್ಲಿಸಿದರೆ ಕರ್ನಾಟಕವೂ ಮಾದರಿ ರಾಜ್ಯವಾಗುತ್ತದೆ. ತುಂಗಭದ್ರಾ ಜಲಾಶಯ ಹೂಳೆತ್ತಲೂ ಬದ್ಧ ಎಂದರು.
ಸಹೋದರರ ಸವಾಲ್: ಬಿಜೆಪಿ ಮುಖಂಡ ಅನಂತ್‌ಕುಮಾರ್ ಮಾತನಾಡಿ, ಯಡಿಯೂರಪ್ಪ, ಶ್ರೀರಾಮುಲು, ಈಶ್ವರಪ್ಪ, ಜಗದೀಶ ಶೆಟ್ಟರ್, ಸದಾನಂದ ಗೌಡ ಪಂಚಪಾಂಡವರಂತೆ ಸಿದ್ದರಾಮಯ್ಯಗೆ ಸಹೋದರರ ಸವಾಲ್ ಹಾಕುತ್ತೇವೆ. ಅವರದು ಜನವಿರೋಧಿ ಆಡಳಿತ ಎಂದರು.
ಗುಜರಾತಿನಲ್ಲಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಜನ 12 ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮಾದರಿಯಲ್ಲಿ ಮೋದಿ ಆಡಳಿತವಿರುತ್ತದೆ. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದೆ, ಮೋದಿಗೆ 60 ತಿಂಗಳ ಅವಕಾಶ ಕೊಟ್ಟು ನೋಡಿ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅವರನ್ನು ಕೆಳಗಿಳಿಸಿ ಆ. 15ಕ್ಕೆ ಮೋದಿ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವಂತೆ ಮಾಡಬೇಕು. ಏರಿಕೆಯಾದ ಆಹಾರ ಪದಾರ್ಥ ಬೆಲೆ ಇಳಿಕೆ ಮಾಡುತ್ತೇವೆ. ಜನಪರ ಸರ್ಕಾರ ನೀಡುತ್ತೇವೆ. ದೇಶದ 32 ನದಿಗಳನ್ನು ಜೋಡಿಸಿ 6 ಕೋಟಿ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. 50 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದರು.
ಕಾಂಗ್ರೆಸ್‌ನವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಚಿತ್ರಹಿಂಸೆ ಕೊಡುತ್ತಿದ್ದಾರೆ. ಕಾರ್ಯಕರ್ತರ ಮನೆ ಮುಂದೆ ಸಿಸಿ ಕ್ಯಾಮೆರಾ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಹೋರಾಡುತ್ತೇವೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್, ಸಂಸದರಾದ ಜೆ. ಶಾಂತಾ, ಸಣ್ಣಫಕ್ಕೀರಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಮಧುಸೂದನ್, ಕುಡಚಿ ಶಾಸಕ ರಾಜೀವ್, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ, ಮುಖಂಡರಾದ ರಾಜುಗೌಡ, ಡಾ೤ ಮಹಿಪಾಲ್, ಸೋಮಲಿಂಗಪ್ಪ, ಚಂದ್ರನಾಯಕ್, ಕೆ.ಎ. ರಾಮಲಿಂಗಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ಹನುಮಂತಪ್ಪ, ಸಂಜಯ್, ಸತೀಶ್ ಚಕ್ರವರ್ತಿ, ಮುರಾಹರಿಗೌಡ, ಪೃಥ್ವಿರಾಜ್ ಸಿಂಗ್, ಸಿದ್ಧಾರ್ಥ ಸಿಂಗ್, ನೂರ್‌ಅಹ್ಮದ್, ಶಿವರಾಮ ರೆಡ್ಡಿ ಇದ್ದರು.
ಕನ್ನಡದಲ್ಲಿ ರಾಜನಾಥ್ ಸಿಂಗ್ ಭಾಷಣ
ಬಳ್ಳಾರಿ ಬಂಧು ಭಗಿನಿಯರೇ ನಿಮಗೆಲ್ಲ ನಮಸ್ಕಾರ! ಎಂದು ಕನ್ನಡದಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮಾತನ್ನು ಆರಂಭಿಸಿದಾಗ, ಜನರು ಸಿಳ್ಳೆ ಹೊಡೆದು, ಸಂತಸ ವ್ಯಕ್ತಪಡಿಸಿದರು. ನಂತರ ರಾಜನಾಥ್ ಸಿಂಗ್ ಹಿಂದಿಯಲ್ಲಿ ಮಾತನಾಡಿದ್ದನ್ನು ಗೋ ಮಧುಸೂದನ್ ಕನ್ನಡದಲ್ಲಿ ಅರ್ಥೈಸಿ ಹೇಳಿದರು.
ಯಡಿಯೂರಪ್ಪ ಕಾಲಿಗೆ ನಮಸ್ಕರಿಸಿದ ಶಾಂತಾ
ಬಳ್ಳಾರಿಯಲ್ಲಿ ನಡೆಯುವ ಪ್ರಚಾರ ಸಭೆಗೂ ಮುನ್ನ ಬಿಜೆಪಿ ಕಚೇರಿಗೆ ಆಗಮಿಸಲು ಹೆಲಿಕಾಪ್ಟರ್ ಮೂಲಕ ತೋರಣಗಲ್‌ನ ಜಿಂದಾಲ್‌ಗೆ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಳ್ಳಾರಿ ಸಂಸದೆ ಜೆ. ಶಾಂತಾ ಕಾಲಿಗೆ ನಮಸ್ಕರಿಸಿದರು.
ಆನಂದ್‌ಸಿಂಗ್ ಮಗ ಸಿದ್ಧಾರ್ಥ ಸಿಂಗ್ ವೇದಿಕೆಯಲ್ಲಿ
ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಬಿ.ಎಸ್. ಆನಂದ್‌ಸಿಂಗ್ ಅವರು ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿರುವುದರಿಂದಾಗಿ, ಆನಂದ್‌ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರು ಬಿಜೆಪಿ ಪ್ರಚಾರ ಸಮಾವೇಶದ ವೇದಿಕೆಯಲ್ಲಿ ಕಾಣಿಸಿಕೊಂಡರು. ವೇದಿಕೆಗೆ ರಾಜನಾಥ್ ಸಿಂಗ್ ಬಂದಾಗ, ಸಿದ್ಧಾರ್ಥ ಅವರ ಬಳಿಗೆ ಹೋಗಿ, ತಾವು ಆನಂದ್‌ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಎಂದು ಪರಿಚಯ ಮಾಡಿಕೊಂಡರು.
ಭಾಷಣದ ಬಳಿಕ ಉದ್ಘಾಟನೆ
ರಾಜನಾಥ್ ಸಿಂಗ್ ಪ್ರಚಾರ ಕಾರ್ಯಕ್ರಮಕ್ಕೆ ಬರುವುದಕ್ಕೆ ತಡವಾದ ಹಿನ್ನೆಲೆಯಲ್ಲಿ ಅನಂತ್‌ಕುಮಾರ್ ಮಾತನಾಡಿದರು. ಅನಂತಕುಮಾರ್ ಮಾತನಾಡುತ್ತಿರುವಾಗ ವೇದಿಕೆಗೆ ರಾಜನಾಥ್‌ಸಿಂಗ್ ಬಂದರು. ನಂತರ ಬಿ.ಎಸ್. ಯಡಿಯೂರಪ್ಪ ಮಾತನಾಡಿದ ಮೇಲೆ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಘಾಟನೆ ಮಾಡಿದ ನಂತರ, ರಾಮುಲು ಮಾತನಾಡಿ, ಕೊನೆಯಲ್ಲಿ ರಾಜನಾಥ್ ಸಿಂಗ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement