ಜನಹಿತ ಮರೆತ ಬಿಜೆಪಿ: ಸಚಿವ ಪಿಟಿಪಿ ಆರೋಪ
ಬಳ್ಳಾರಿ: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ, ಭೂ ಮಾಫಿಯಾದಲ್ಲಿ ತೊಡಗಿ ಜನಹಿತ ಮರೆತಿದೆ ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಹೇಳಿದರು. ಬಳ್ಳಾರಿ ತಾಲೂಕು, ಕಂಪ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಮ್ಮಿಗನೂರು, ಚಾನಾಳ್ ಮುಂತಾದ ಗ್ರಾಮಗಳಲ್ಲಿ ಬುಧವಾರ ಮತ ಪ್ರಚಾರ ಮಾಡಿ ಮಾತನಾಡಿದ ಅವರು, ಭ್ರಷ್ಟ ಬಿಜೆಪಿಗೆ ಮತ ಹಾಕಿದರೆ ಅಂಥ ಸ್ಥಿತಿ ಎದುರಾಗುತ್ತದೆ. ಬಿಜೆಪಿಗರು ಅಧಿಕಾರ ದುರ್ಬಳಕೆ ಮಾಡಿಕೊಂಡು ಗಣಿಗಾರಿಕೆ ನಡೆಸಿ, ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಬಿಜೆಪಿ ಸರ್ಕಾರವನ್ನು ಜನ ತಿರಸ್ಕರಿಸಲು ಅವರ ಸ್ವಾರ್ಥ ರಾಜಕಾರಣ ಕಾರಣ ಎಂದರು. ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ಮಾತನಾಡಿ, ಕಾಂಗ್ರಸ್ ಸರ್ಕಾರ ಜನಪರ ಯೋಜನೆ ಜಾರಿಗೊಳಿಸಿದೆ. ಜನಪರ ಕಾಳಜಿಯುಳ್ಳ ಎನ್.ವೈ. ಹನುಮಂತಪ್ಪರನ್ನು ಗೆಲ್ಲಿಸಿ ಎಂದರು. 300ಕ್ಕೂ ಹೆಚ್ಚು ಬಿಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಸೇರಿದರು. ನೆಲ್ಲುಡಿ ಸೇರಿದಂತೆ ವಿವಿಧೆಡೆ ಮತ ಪ್ರಚಾರ ನಡೆಸಿದರು. ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಕೆ.ಎಸ್.ಎಲ್. ಸ್ವಾಮಿ ಇತರರು ಇದ್ದರು.