ಮಳೆ: ನೆಲಕ್ಕುರುಳಿದ ಬಾಳೆ
ಹೂವಿನಹಡಗಲಿ: ತಾಲೂಕಿನ ವಿವಿಧಡೆ ಮಂಗಳವಾರ ರಾತ್ರಿ ಅಕಾಲಿಕ ಆಲಿಕಲ್ಲು ಮಳೆ, ಭಾರಿ ಪ್ರಮಾಣದ ಗಾಳಿಗೆ ಬಾಳೆ ಬೆಳೆ ಮತ್ತು ಮನೆಗಳಿಗೆ ಅಪಾರ ಹಾನಿ ಸಂಭವಿಸಿದೆ.
ತಾಲೂಕಿನ ಸೋಗಿ ಗ್ರಾಮದಲ್ಲಿ 126 ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಇಟ್ಟಿಗಿ, ಉತ್ತಂಗಿ, ಹುಗಲೂರು, ಕೋಮಾರನಹಳ್ಳಿ ತಾಂಡಾ, ನಾಗತಿ ಬಸಾಪುರ, ಗೋವಿಂದಪುರ ತಾಂಡಾ, ಅಡವಿಮಲ್ಲಿನಕೇರಿ ಇತರೆ ಕಡೆಗಳಲ್ಲಿ ಸಾಧಾರಣ ಮಳೆಯಾಗಿರುವ ವರದಿಯಾಗಿದೆ.
ಸೋಗಿ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಗೆ ಸಿಮೆಂಟ್ ತಗಡುಗಳು ಬಿರುಕು ಬಿಟ್ಟಿವೆ. ಹೆಂಚುಗಳು ಒಡೆದು ಹೋಗಿದ್ದು, ಭಾರಿ ಪ್ರಮಾಣದ ಗಾಳಿಗೆ ತಗಡುಗಳು ಹಾರಿ ಹೋಗಿ ಮನೆಗಳಿಗೆ ಹಾನಿ ಸಂಭವಿಸಿದೆ.
ನೆಲಕ್ಕುರಿಳಿದ ಬಾಳೆ: ಬಾಳೆ ಬೆಳೆದು ಬಾಳು ಬಂಗಾರವಾಗುವ ಮುನ್ನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಹೊಂಬಾಳೆ ಫಲ ಬಿಟ್ಟು ಬೆಳೆಯುವ ಸಂದರ್ಭದಲ್ಲಿ ಅಕಾಲಿಕ ಆಲಿಕಲ್ಲು ಮಳೆಗೆ 4 ಎಕರೆ ಪ್ರದೇಶದ ಏಲಕ್ಕಿ ಬಾಳೆ ಬೆಳೆ ಗಾಳಿಗೆ ನೆಲಕ್ಕುರುಳಿ ಬಿದ್ದಿದೆ.
ಈ ಕುರಿತು ಇಟ್ಟಿಗಿ ಹೋಬಳಿ ಉಪ ತಹಸೀಲ್ದಾರ್ ವಿನಾಯಕರನ್ನು ಮಾತನಾಡಿಸಿದಾಗ, ಈಗಾಗಲೇ ತಮ್ಮ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೋಗಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇನ್ನು ವರದಿ ತಯಾರಿಸಿಲ್ಲ ಎಂದು ಹೇಳಿದರು.