ರಾಗಾ ಆಲೋಚಿಸಿ ಮಾತಾಡಲಿ
ಬಳ್ಳಾರಿ: ರಾಹುಲ್ ಗಾಂಧಿ ಅವರು ಯಾರೋ ಬರೆದುಕೊಟ್ಟಿದ್ದನ್ನು ಮಾತನಾಡುವುದಕ್ಕಿಂತ ಪ್ರಾಯೋಗಿಕವಾಗಿ ಆಲೋಚಿಸಿ ಮಾತನಾಡಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ತಿಳಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡುವುದು ಸರಿಯಲ್ಲ. ಪ್ರಾಯೋಗಿಕವಾಗಿ ಆಲೋಚಿಸಿ ಮಾತನಾಡಬೇಕು. ಯಾರೊ ಬರೆದಿದ್ದನ್ನು ಓದುವುದು ದುರ್ದೈವದ ಸಂಗತಿಯಾಗಿದೆ ಎಂದರು. 150 ವರ್ಷಗಳ ಹಿಂದೆ ನರೇಂದ್ರ (ಸ್ವಾಮಿ ವಿವೇಕಾನಂದ) ಅವರು ಅಮೆರಿಕದ ಚಿಕಾಗೋ ನಗರಕ್ಕೆ ತೆರಳಿ ಧರ್ಮಸಭೆಯಲ್ಲಿ ಮಾತನಾಡಿ ದೇಶದ ಪ್ರತಿಷ್ಠೆ ಎತ್ತಿ ಹಿಡಿದರು, ಇದೀಗ ಅದೇ ಹೆಸರಿನ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲು ಹೊರಟಿದ್ದಾರೆ. ಅವರಿಗೆ ಜನರು ಆಶೀರ್ವಾದ ಮಾಡಬೇಕಾಗಿದೆ. ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಗರಣದಿಂದ ತುಂಬಿ ಹೋಗಿದೆ. ಆರ್ಥಿಕ ಭದ್ರತೆ ಇಲ್ಲವಾಗಿದೆ. ರಕ್ಷಣೆ ವ್ಯವಸ್ಥೆ ಕುಸಿದಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಮೋದಿ ದೇಶದ ಶಕ್ತಿಯಾಗಿದ್ದಾರೆ. ದೇಶದ ರು. 125 ಕೋಟಿ ಜನರು ನರೇಂದ್ರ ಮೋದಿಯನ್ನು ಪ್ರಧಾನಿ ಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಮೋದಿ ಭಾರತದ ಆಸ್ತಿಯಾಗಿದ್ದಾರೆ ಎಂದು ತಿಳಿಸಿದರು. ಕೆಎಂಎಫ್ ರಾಜ್ಯಾಧ್ಯಕ್ಷ ಸೋಮಶೇಖರ ರೆಡ್ಡಿ ಮಾತನಾಡಿದರು.