ಶ್ರೀರಾಮುಲು-ಹನುಮಂತಪ್ಪ ಎಲೆಕ್ಷನ್ ಒಪ್ಪಂದ: ಶ್ರೀನಿವಾಸ
ಹಗರಿಬೊಮ್ಮನಹಳ್ಳಿ: ಬಿಜೆಪಿಯ ಶ್ರೀರಾಮುಲು -ಕಾಂಗ್ರೆಸ್ನ ಎನ್.ವೈ. ಹನುಮಂತಪ್ಪ ಇಬ್ಬರು ಅಣ್ಣ-ತಮ್ಮಂದಿರಿದ್ದಂತೆ. ಹೊಂದಾಣಿಕೆ ರಾಜಕಾರಣಕ್ಕೆ ಇಬ್ಬರು ಸಿದ್ದಹಸ್ತರು. ಸಮಯ ಬಂದ್ರೆ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಎಲೆಕ್ಷನ್ ಮಾಡ್ತಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕುಡಿತಿನಿ ಶ್ರೀನಿವಾಸ ಆರೋಪಿಸಿದ್ದಾರೆ.
ಬುಧವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚಿಸಿದ ಬಳಿಕ ಪಕ್ಷದ ಮುಖಂಡ ಬನ್ನಿಗೊಳ ವೆಂಕಣ್ಣರ ಕಚೇರಿಯಲ್ಲಿ ಜರುಗಿದ ಪತ್ರೀಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಇಬ್ಬರ ಮಧ್ಯೆ ಬಹುದಿನಗಳಿಂದಲೂ ಮಿತ್ರತ್ವವಿದೆ. ಸ್ವಲ್ಪ ಹೆಚ್ಚುಕಡಿಮೆ ಆದ್ರು ಇಬ್ಬರು ಅಡ್ಜಸ್ಟ್ ಆಗಿ ಬಿಡ್ತಾರೇ, ಒಂದು ಸಲ ನೀವು ಗೆಲ್ಲರ್ರಿ ಇನ್ನೊಂದು ಸಲ ನೀವು ಗೆಲ್ಲರ್ರೀ ಎಂಬ ತತ್ವದವರು. ಹೀಗಾಗಿ ಈ ಸಲ ಜನ ಇಬ್ಬರಿಗೂ ಬುದ್ಧಿ ಕಲಿಸುತ್ತಾರೆಂದರು.
ಜೆಡಿಎಸ್ ಅಭ್ಯರ್ಥಿ ರವಿನಾಯಕ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮ ಗಣಿಗಾರಿಕೆ, ದುರಾಡಳಿತದಲ್ಲಿ ಇಬ್ಬರಿಗೂ ಸಮಪಾಲು ಇದೆ. ಹತ್ತು ವರ್ಷಗಳಿಂದ ಯುಪಿಎ ಸರ್ಕಾರ ಕೇಂದ್ರದಲ್ಲಿ ಲೂಟಿ ಹೊಡೆದರೆ ಇತ್ತ ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ನಡೆಸಿದ ಬಿಜೆಪಿ ರಾಜ್ಯವನ್ನು ಗೂಡಿಸಿ ಗುಂಡಾಂತರ ಮಾಡಿದೆ ಎಂದರು.
ಈ ಬಾರಿ ಕೇಂದ್ರದಲ್ಲಿ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಬದಲಿಗೆ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ. ಜೆಡಿಎಸ್ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳಲಿದೆ. ಬಳ್ಳಾರಿಯಲ್ಲಿ ಜೆಡಿಎಸ್ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರ ನಡೆಸಲು ಬಲ ತುಂಬಬೇಕೆಂದು ಮನವಿ ಮಾಡಿಕೊಂಡರು.
ಜೆಡಿಎಸ್ ಮುಖಂಡರಾದ ವೈ. ಮಲ್ಲಿಕಾರ್ಜುನ, ಬನ್ನಿಗೋಳ ವೆಂಕಣ್ಣ, ಸೋಮಲಿಂಗನಗೌಡ, ಮುಂಡ್ರಿಗಿ ನಾಗರಾಜ, ಕಲ್ಗುಡಿ ಕಮ್ಮಲಮ್ಮ, ಸುಭಾನ್ ಸಾಬ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.