ಬುದ್ಧಿಮಾಂದ್ಯನಿಂದ ಗ್ರಾಮ ಸ್ವಚ್ಛತೆ ಕಾರ್ಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಏ. 11
ನಿತ್ಯ ಬೆಳಗಾದರೆ ಸಾಕು ಇಲ್ಲೊಬ್ಬ ವ್ಯಕ್ತಿ ಹೋಟೆಲ್‌ಗಳ ಮುಂದೆ ಪ್ರತ್ಯಕ್ಷನಾಗಿ, ನಿಮ್ಮ ಅಂಗಡಿಯಲ್ಲಿ ಕಸ ಇದ್ರೆ ನಮ್ಮ ಪುಟ್ಟಿಗೆ ಹಾಕಿ ಎಂದು ಪುಟ್ಟಿ ಹಿಡಿದುಕೊಂಡು ನಿಲ್ಲುತ್ತಾನೆ.
ಹೌದು, ಹತ್ತಾರು ಹೋಟೆಲ್‌ಗಳನ್ನು ಹೊಂದಿರುವ ತಾಲೂಕಿನ ಮಾಗಳ ಗ್ರಾಮದ ನಿಂಗಪ್ಪ ಹೆಬ್ಬಾಳ್ ಕಸ ವಿಲೇವಾರಿ ಕಾಯಕ ಚಾಚು ತಪ್ಪದೇ ಮಾಡುತ್ತಿದ್ದಾನೆ. ಹೋಟೆಲ್‌ಗಳಲ್ಲಿನ ತ್ಯಾಜ್ಯ ಪೇಪರ್, ಚಹಾದ ಪ್ಲಾಸ್ಟಿಕ್ ಕಪ್ ಸೇರಿದಂತೆ ಇನ್ನಿತರ ಕಸವನ್ನು ಸಂಗ್ರಹಿಸುತ್ತಾನೆ.
ಸ್ಥಳೀಯ ಸಂಸ್ಥೆಗಳಿಗೆ ಜನರು ಪ್ರತಿ ತಿಂಗಳು ಸ್ವಚ್ಛತೆಗಾಗಿ ತೆರಿಗೆ ಕಟ್ಟಿದ್ದರೂ ಸ್ವಚ್ಛತೆ ಮಾಡಲಾರದ ಪರಿಸ್ಥಿತಿ ಇರುವಾಗ ನಿಂಗಪ್ಪ ಹೆಬ್ಬಾಳ್ ಗ್ರಾಮ ಪಂಚಾಯ್ತಿ ವ್ಯವಸ್ಥೆ ನಾಚುವಂತೆ ನಿತ್ಯ ಕಸ ಸಂಗ್ರಹಿಸಿ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್‌ಗಳನ್ನು ಆರಿಸಿ ಸುಟ್ಟು ಸ್ವಚ್ಛತೆ ಕಾಪಾಡುತ್ತಿದ್ದಾನೆ.
ನಿಂಗಪ್ಪ ಸ್ವಲ್ಪ ಮಟ್ಟಿನ ಬುದ್ಧಿಮಾಂದ್ಯ ವ್ಯಕ್ತಿಯಾಗಿದ್ದರೂ, ಸ್ವಚ್ಛತೆಗೆ ಆದ್ಯತೆ ನೀಡಿರುವ ನಿಷ್ಠಾವಂತ. ಹೋಟೆಲ್ ಮಾಲೀಕರಿಂದ ಯಾವ ಫಲಾಪೇಕ್ಷೆ ಬೇಡದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ನಿಂಗಪ್ಪ ನಿಜಕ್ಕೂ ಮಾದರಿ ವ್ಯಕ್ತಿ.
ಕಸ ರಸ್ತೆಯಲ್ಲಿ ಹಾಕಿ ಹಾಗೆ ಬಿಟ್ಟರೆ ನಾಯಿ, ಕಾಗೆ, ಕೋಳಿಗಳು ಕೆದರಿ ರಸ್ತೆ ತುಂಬೆಲ್ಲ ಕಸ ಹರಡುತ್ತದೆ. ಮಳೆ ಬಂದಾಗ ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳು ನದಿ ನೀರಿಗೆ ಸೇರಿ ನದಿ ಮಲಿನವಾಗುತ್ತದೆ. ಆದ್ದರಿಂದ ತಾನು ಸಂಗ್ರಹಿಸಿರುವ ಕಸ, ಪ್ಲಾಸ್ಟಿಕ್‌ಗಳನ್ನು ಒಂದೆಡೆ ಸಂಗ್ರಹಿಸಿ ಪೂರ್ಣ ಸುಡುವವರೆಗೂ ಆತ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಾರೆ ಹೋಟೆಲ್ ಮಾಲೀಕ ಶಾಂತಣ್ಣನವರ ವೀರೇಶ.
ಈ ಕುರಿತು ನಿಂಗಪ್ಪನನ್ನು ವಿಚಾರ ಮಾಡಲೆಂದು ಹೋದರೆ ಆತ ಏನು ಮಾತನಾಡುವುದಿಲ್ಲ. ನಗು ಮುಖದಿಂದ ಮುಂದೆ ಸಾಗುತ್ತಾನೆ. ಅವಿದ್ಯಾವಂತನಾಗಿರುವ ನಿಂಗಪ್ಪನಿಗೆ ಕಸ ವಿಲೇವಾರಿ ಮಾಡಿ ಗ್ರಾಮದ ಸ್ವಚ್ಛತೆ ಕಾಪಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬುದ್ಧಿವಂತರಾಗಿರುವ ಜನ ತಮ್ಮ ಮನೆಯಲ್ಲಿನ ಕಸವನ್ನು ರಸ್ತೆಗೆ ತಂದು ಹಾಕುವ ಇಂದಿನ ಪರಿಸ್ಥಿತಿಯಲ್ಲಿ ಈ ನಿಂಗಪ್ಪನಿಂದ ಎಲ್ಲರೂ ಪಾಠ ಕಲಿಯಬೇಕಿದೆ.
ಚಂದ್ರು ಕೊಂಚಿಗೇರಿ