ಸಾಂಕ್ರಾಮಿಕ ರೋಗಗಳಿಗೆ ಸಾರ್ವಜನಿಕರು ಹೈರಾಣ
ಹಗರಿಬೊಮ್ಮನಹಳ್ಳಿ: ತಾಲೂಕಿನ ಆನೆಕಲ್ಲು ತಾಂಡಾದಲ್ಲಿ ಹಲವು ದಿನಗಳಿಂದ ಕಾಣಿಸಿಕೊಂಡಿರುವ ವಿಷಮಶೀತಜ್ವರ, ಡೆಂಘೀ, ಚಿಕೂನ್‌ಗುನ್ಯಾ ತಾಂಡಾದ ನಿವಾಸಿಗಳನ್ನು ಸಂಪೂರ್ಣ ಹೈರಾಣು ಮಾಡಿದೆ.
ಸುಮಾರು ನಾಲ್ಕು ನೂರಕ್ಕೂ ಅಧಿಕ ಸಂಖ್ಯೆಯ ಮನೆಗಳಿರುವ ಈ ತಾಂಡಾದಲ್ಲಿ ಪ್ರತಿ ಮನೆಗೆ ಇಬ್ಬರಂತೆ ತಾಂಡಾದ ನಿವಾಸಿಗಳು ವಿವಿಧ ರೋಗಗಳಿಗೆ ತುತ್ತಾಗಿ ಹಾಸಿಗೆ ಹಿಡಿದು ಮಲಗಿದ್ದಾರೆ. ತಾಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ತಾಂಡಾದಲ್ಲಿ ಠಿಕಾಣಿ ಹೂಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಪರಿಸ್ಥಿತಿ ಸುಧಾರಿಸಲು ಇಲಾಖೆ ಸಾಕಷ್ಟು ಹೆಣಗಾಡುತ್ತಿದೆ.
ಇತ್ತ ಶಂಕಿತ ಡೆಂಘೀಗೆ ಚಿಕಿತ್ಸೆ ಫಲಿಸದೆಯೇ ತಾಂಡಾದ ನಿವಾಸಿ ರೇಣಿಕಿಬಾಯಿ (35) ಎಂಬ ಮಹಿಳೆಯ ಬುಧವಾರವೇ ದಾವಣಗೆರೆಯಲ್ಲಿ ಸಾವನ್ನಪ್ಪಿದ್ದಾಳೆ. ತಾಂಡಾದ ಬಹುತೇಕರು ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದರೆ ಇತ್ತ ಇನ್ನಷ್ಟು ಮಂದಿ ಕುಟುಂಬದ ಸದಸ್ಯರನ್ನು ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ತಾಂಡಾದಲ್ಲಿನ ಬಹುತೇಕ ನಿವಾಸಿಗಳು ಕೂಲಿಗಾಗಿ ನಾಡಿನ ವಿವಿಧ ಭಾಗಗಳಿಗೆ ಗುಳೆ ಹೋಗಿದ್ದರು. ಇದರಲ್ಲಿ ಕಬ್ಬು ಕಟಾವು ಮಾಡುವ ಸಲುವಾಗಿಯೇ ಮಂಡ್ಯ, ಮೈಸೂರು, ಧಾರವಾಡ ಸೇರಿದಂತೆ ವಿವಿಧ ಕಡೆಗಳಿಗೆ ಇಲ್ಲಿಂದ ಗುಳೆ ಹೋಗಿದ್ದವರು ಯುಗಾದಿ ಹಬ್ಬಕ್ಕೆ ತಾಂಡಾಕ್ಕೆ ಮರಳಿ ಬಂದಿದ್ದಾರೆ. ಕೂಲಿಗಾಗಿ ಹೋಗಿದ್ದ ಸ್ಥಳದಲ್ಲಿಯೇ ಅವರು ಈ ರೀತಿಯ ಸಾಂಕ್ರಾಮಿಕ ರೋಗಗಳ ಜಾಡ್ಯಕ್ಕೆ ತುತ್ತಾಗಿರಬಹುದೆಂದು ಆರೋಗ್ಯ ಇಲಾಖೆ ಶಂಕಿಸಿದೆ.