ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮಸ್ಯೆಗೆ ಪರಿಹಾರ: ಭರವಸೆಗೆ ಸೀಮಿತ

Lingaraj Badiger
Updated On : 13 Apr 2014, 10:20 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 12
'ಸಂಕಟ ಬಂದಾಗ ವೆಂಕಟರಮಣ' ಎನ್ನುವಂತೆ ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರ ಸಮಸ್ಯೆಗಳು ನೆನಪಾಗುತ್ತವೆ. ಅದಕ್ಕೆ ಬಳ್ಳಾರಿ ಜಿಲ್ಲೆ ಹೊರತಾಗಿಲ್ಲ.
ಜನಸಾಮಾನ್ಯರು ಹತ್ತು ಹಲವು ಮೂಲಸೌಲಭ್ಯಗಳ ಕೊರತೆಯನ್ನು ಹಲವು ವರ್ಷಗಳಿಂದ ಎದುರಿಸುತ್ತಿದ್ದರೂ, ರಾಜಕಾರಣಗಳಿಗಳು ಈಡೇರಿಸುವ ಮನಸ್ಸು ಮಾಡುತ್ತಿಲ್ಲ. ಆದರೆ ಭರವಸೆಗಳಿಗೇನೂ ಕೊರತೆಯಿಲ್ಲ.
ಈ ಭಾಗದ ಜನರಿಗೆ ಕುಡಿಯಲು, ಕೃಷಿ ನೀರಾವರಿಗೆ ತುಂಗಭದ್ರಾ ಜಲಾಶಯದ ನೀರೇ ಮೂಲಾಧಾರ. ಈವರೆಗೂ ಜಲಾಶಯದ ಹೂಳು ತೆಗೆದು, ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಯೋಜನೆ ರೂಪಿಸಿಲ್ಲ.
ಮೂಲ ಅಭಿವೃದ್ಧಿ: ಫ್ಲೋರೈಡ್‌ಯುಕ್ತ ನೀರು ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಜಿಲ್ಲೆಯ ಹೆಚ್ಚಿನ ಗ್ರಾಮಗಳಲ್ಲಿ ಈ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕೆಲವು ಗ್ರಾಮಗಳಲ್ಲಿ ಪರ್ಯಾಯ ಯೋಜನೆ ರೂಪಿಸಿದ್ದರೂ ಅನುಷ್ಠಾನವಾಗಿಲ್ಲ. ಬಹುತೇಕ ಗ್ರಾಮಗಳ ಜನರು ಇನ್ನೂ ಫ್ಲೋರೈಡ್‌ಯುಕ್ತ ನೀರನ್ನೇ ಬಳಕೆ ಮಾಡುತ್ತಿದ್ದಾರೆ.ನಂಜುಂಡಪ್ಪ ವರದಿ ಪ್ರಕಾರ, ಅತ್ಯಂತ ಹಿಂದುಳಿದ ತಾಲೂಕುಗಳಾದ ಕೂಡ್ಲಿಗಿ, ಸಂಡೂರಿಗೆ ಮೂಲಸೌಲಭ್ಯ ಕಲ್ಪಿಸಬೇಕಿದೆ.
ರಸ್ತೆ, ಮನೆ ಇಲ್ಲ: ಬತ್ತದ ಕಣಜ ಖ್ಯಾತಿ ಪಡೆದಿರುವ ಸಿರುಗುಪ್ಪ ತಾಲೂಕಿನ ರಸ್ತೆಗಳ ಅಧೋಗತಿಯಲ್ಲಿವೆ. ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಹತ್ತು ಹಲವು ವರ್ಷಗಳ ಬೇಡಿಕೆಯಾಗಿದೆ. ಸಿರುಗುಪ್ಪ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆ ಬೇಡಿಕೆ ಈ ವರೆಗೂ ಈಡೇರಿಲ್ಲ. ಆಸರೆ ಮನೆಗಳು ಕೆಲವೊಂದು ಗ್ರಾಮಗಳಲ್ಲಿ ಪೂರ್ಣಗೊಂಡಿಲ್ಲ.
ನೀರಿನ ದಾಹ: ಹೊಸಪೇಟೆ ತಾಲೂಕಿನಲ್ಲಿ ತುಂಗಭದ್ರಾ ಜಲಾಶಯ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡುವುದು ಹಲವು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿದೆ. ಜಲಾಶಯ ಹೊಂದಿದ್ದರೂ, ಹೊಸಪೇಟೆ ನಗರದ ಶೇ. 30ರಷ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಪ್ರತಿಯೊಂದು ಚುನಾವಣೆಯಲ್ಲಿ ಕೊಟ್ಟೂರನ್ನು ತಾಲೂಕಾಗಿ ಘೋಷಣೆ ಮಾಡಲಾಗುತ್ತದೆ ಎಂದು ಹೇಳುತ್ತಲೇ ಬರಲಾಗಿದೆ. ಸಂಡೂರು ನಗರಕ್ಕೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಪೂರೈಕೆ ಬೇಡಿಕೆ ಈ ವರೆಗೂ ಸಾಕಾರಗೊಂಡಿಲ್ಲ. ಹೂವಿನಹಡಗಲಿ ತಾಲೂಕಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅಂಚೆ ಇಲಾಖೆ ಬೇಡಿಕೆ ಇದ್ದರೂ, ಮನ್ನಣೆ ದೊರೆತಿಲ್ಲ. ಇನ್ನು ಮೈಲಾರ- ತೋರಣಗಲ್ ರಾಜ್ಯ ಹೆದ್ದಾರಿ, ಮಂಡ್ಯ-ಹೂವಿನಹಡಗಲಿ ಹೆದ್ದಾರಿ, ಹರಕಬಾವಿ-ಚಳ್ಳಕೇರಿ, ಯಕ್ಕುಂಡಿ, ಮೊಳಕಾಲ್ಮೂರು ರಸ್ತೆಗಳು ಅಭಿವೃದ್ಧಿ ಕಾಣಬೇಕಾಗಿದೆ. ಬಳ್ಳಾರಿಯಿಂದ- ಹೊಸಪೇಟೆ ವರೆಗೆ ರಾಷ್ಟ್ರೀಯ ಹೆದ್ದಾರಿ 63 ರಸ್ತೆಯಾಗಿಲ್ಲ. ಬಳ್ಳಾರಿ ತಾಲೂಕಿನಲ್ಲಿ ಕೆರೆಗಳು ನಿರ್ಮಾಣವಾಗಿದ್ದರೂ, ಸರಿಯಾದ ನೀರು ಪೂರೈಕೆಯಾಗಿಲ್ಲ. ಈಗಲೂ ತಾಲೂಕಿನ ಬಹುತೇಕ ಗ್ರಾಮಗಳು ಫ್ಲೋರೈಡ್ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ನೀರಿಗಾಗಿ ಜನ ಪರದಾಡುತ್ತಿದ್ದಾರೆ.
ಸಮಸ್ಯೆಗಳ ಬಗ್ಗೆ ಭರವಸೆ ನೀಡುವ ರಾಜಕಾರಣಿಗಳು, ಈ ಬಾರಿಯೂ ಭರವಸೆಯಲ್ಲಿಯೇ ಚುನಾವಣೆ ಮುಗಿಸುತ್ತಾರೋ ಅಥವಾ ಗೆದ್ದು ಬಂದು ಜನರ ಸಮಸ್ಯೆಗಳಿಗೆ ಪರಿಹಾರಕ್ಕೆ ನಾಂದಿ ಹಾಡುವರೋ ಎಂಬುದು ಕಾದುನೋಡಬೇಕಾಗಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement