ಶಾಸಕ ನಾಗೇಂದ್ರ ಬೆಂಬಲಿಗರಿಂದ ಯುವಕರ ಕಡೆಗಣನೆ: ಗುನ್ನಳ್ಳಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಏ. 13
ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಬೆಂಬಲಿಗರು ಯುವ ಮುಖಂಡರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಡೆಗಣಿಸಿರುವುದು ಬೇಸರ ತರಿಸಿದೆ ಎಂದು ಸ್ಥಳೀಯ ಯುವ ಮುಖಂಡ ಗುನ್ನಳ್ಳಿ ರಾಘವೇಂದ್ರ, ಜಿ. ಲಕ್ಷ್ಮಿಪತಿ ಇತರರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಕೂಡ್ಲಿಗಿ ಕ್ಷೇತ್ರಕ್ಕೆ ಮೊದಲ ಬಾರಿಗೆ ನಾಗೇಂದ್ರ ಆಗಮಿಸಿ ಸ್ಪರ್ಧಿಸಿದ್ದ ಸಂದರ್ಭದಿಂದಲೂ ಅವರ ಪರ ನಿಷ್ಠಾವಂತ ಕಾರ್ಯಕರ್ತರಂತೆ ದುಡಿದಿದ್ದೇವೆ. ಅವರ ಯಾವುದೇ ಕಾರ್ಯಕ್ರಮದಲ್ಲಿ ಕೆಲಸದಲ್ಲಿ ತೊಡಗಿಕೊಂಡು ಯಶಸ್ವಿಗೊಳಿಸುವಲ್ಲಿ ಮುಂದಾಗಿದ್ದೆವು. ಆದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಶಾಸಕ ನಾಗೇಂದ್ರ ಬೆಂಬಲ ಇರುವುದರಿಂದ ಇಲ್ಲಿನ ಕೆಲವು ಮುಖಂಡರೇ ಮುಖ್ಯ ಎನ್ನುವಂತೆ ವರ್ತಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ನಮ್ಮಂಥ ಯುವಕರನ್ನು ಕಡೆಗಣಿಸಿರುವುದು ಯಾವ ನ್ಯಾಯ? ಹೀಗಾದರೆ ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕರ ಬೆಂಬಲಿಗರನ್ನು ಒಗ್ಗಟ್ಟಿನಿಂದ ಕೂಡಿಸುವ ಕಾರ್ಯಕ್ಕೆ ಹಿನ್ನಡೆಯಾಗುವುದಿಲ್ಲವೇ ಎಂದು ಗುನ್ನಳ್ಳಿ ರಾಘವೇಂದ್ರ ಪ್ರಶ್ನಿಸಿದರು.
ಶಾಸಕ ನಾಗೇಂದ್ರ ಅವರ ಅನುಪಸ್ಥಿತಿಯಿಂದ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಈ ಚುನಾವಣೆಯಲ್ಲಿ ನಮ್ಮಂಥ ಯುವಕರನ್ನು ಕಡೆಗಣಿಸಿದ್ದಾರೆ. ಇದರಿಂದ ಅನೇಕ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ತಂದಿದೆ. ನಿಷ್ಠಾವಂತರ ಕಡೆಗಣನೆಯಿಂದ ಫಲಿತಾಂಶದಲ್ಲಿ ಶ್ರೀರಾಮುಲುಗೆ ಹೊಡೆತ ಬೀಳಲಿದೆ ಎಂಬ ಆತಂಕವೂ ಕಾಡುತ್ತಿದೆ ಎಂದು ಸ್ಥಳೀಯ ಮುಖಂಡರ ವರ್ತನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಸಕ ಬಿ. ನಾಗೇಂದ್ರ ಅವರ ಬೆಂಬಲಿಗರಾದ ಗುನ್ನಳ್ಳಿ ರಾಘವೇಂದ್ರ, ಲಕ್ಷ್ಮೀಪತಿ, ಕೆ.ಕೆ. ಹಟ್ಟಿ ಬಸವರಾಜ, ಜಿ. ಮಂಜುನಾಥ, ತಳವಾರ ಪ್ರದೀಪ ಸೇರಿದಂತೆ ಹಲವು ಯುವ ಮುಖಂಡರು ಹಾಜರಿದ್ದರು.