ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು
ಸಿರುಗುಪ್ಪ: ಕ್ಷೇತ್ರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಬರಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ ಆರೋಪಿಸಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಪ್ರಗತಿಪರ ಕಾರ್ಯಗಳಾಗಿಲ್ಲ. ತಮ್ಮ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಮಂಜೂರಾದ ರಾರಾವಿ ಸೇತುವೆ, ಉಪ್ಪಾರಹೊಸಳ್ಳಿ, ಅರಳಿಗನೂರು, ಪೊಪ್ಪನಹಾಳ್ ಸುವರ್ಣ ಗ್ರಾಮಗಳ ಕಾಮಗಾರಿ, ನಡುವಿಯಿಂದ ಉಡೆಗೋಳ, ಕೊಂಚಗೇರಿ, ಸಿರಿಗೇರಿ, ಮುದಿನೂರು, ಕೆ. ಸುಗೂರು ರಸ್ತೆಗಳು ಸೇರಿದಂತೆ ಇತರೆ ರು. 150 ಕೋಟಿ ಕಾಮಗಾರಿಗಳು ಕುಂಠಿತವಾಗಿವೆ. ಅನೇಕ ಅನುದಾನಗಳು ವಾಪಸ್ ಹೋಗಿವೆ ಎಂದು ಕಾಂಗ್ರೆಸ್ ಆಡಳಿತ ವೈಫಲ್ಯ ಖಂಡಿಸಿದರು.
ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಈ ಕ್ಷೇತ್ರದಲ್ಲಿ ಮಟ್ಕಾ, ಜೂಜಾಟ, ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕಾನೂನಿಗಾಗಿ ಪೊಲೀಸ್ ಸ್ಟೇಷನ್ ಮೊರೆ ಹೋದರೆ ಪಕ್ಷ ಭೇದ ಮಾಡುತ್ತಾರೆ. ಜಗಳಬೇಡ ರಾಜಿ ಆಗುತ್ತೇವೆ. ನಿಮ್ಮದು ಯಾವ ಪಕ್ಷ? ಹಣ ಎಷ್ಟು ಕೊಡುತ್ತೀರಿ ಎಂದು ಕೇಳುವುದಲ್ಲದೆ, ಕಾಂಗ್ರೆಸೇತರ ಕಾರ್ಯಕರ್ತರ ಸುದ್ದಿಗಳನ್ನು ತೆಕ್ಕಲಕೋಟೆ ಪೊಲೀಸ್ ಠಾಣೆ ಪಿಎಸ್‌ಐ ಎಂ. ಆಲೇಶ ಜನಪ್ರತಿನಿಧಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.
ವಿಪಕ್ಷದ ನಾಯಕನಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ತೆಕ್ಕಲಕೋಟೆ ರೈಸ್ ಮಿಲ್ ವಿಚಾರದಲ್ಲಿ ಶನಿವಾರ ನಡೆದ ಘಟನೆ ಬಗ್ಗೆ ನ್ಯಾಯ ಕೇಳುವುದಕ್ಕಾಗಿ ಪೊಲೀಸ್ ಸ್ಟೇಷನ್ ಹೋದಾಗ ಪಿಎಸ್‌ಐ ಆಲೇಶ ಕಾನೂನುಬಾಹಿರವಾಗಿ ನಡೆದುಕೊಂಡು, ಕಾಂಗ್ರೆಸ್ ಪ್ರತಿನಿಧಿಯಂತೆ ವರ್ತಿಸಿರುವದನ್ನು ಖಂಡಿಸುತ್ತೇವೆ. ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸುವಂತೆ ಎಸ್ಪಿ ಅವರನ್ನು ಆಗ್ರಹಿಸುತ್ತೇವೆ ಎಂದರು.
ಜಿಪಂ ಸದಸ್ಯ ಡಿ. ಸೋಮಪ್ಪ, ನಿಟ್ಟೂರು ನಾಗರಾಜಗೌಡ, ಕುಂಟ್ನಾಳ ಮಲ್ಲಿಕಾರ್ಜುನಸ್ವಾಮಿ, ಸಿದ್ದಪ್ಪ ಇತರರು ಇದ್ದರು.