ಅಸಲಿ ಬಳ್ಳಾರಿ ರಾಜಕಾರಣ ಶುರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 15
ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದ್ದರಿಂದ ಅಸಲಿ ಬಳ್ಳಾರಿ ಸ್ಟೈಲ್‌ನ ರಾಜಕಾರಣ ಆರಂಭಿಸಲು ಉತ್ಸುಕರಾಗಿರುವ ರಾಜಕಾರಣಿಗಳು ಚುನಾವಣೆ ಆಯೋಗದ ಹದ್ದಿನ ಕಣ್ತಪ್ಪಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೀಮಿತವಾಗದೆ, ಒಬ್ಬರ ಮೇಲೊಬ್ಬರು ಕೇಸುಗಳನ್ನು ದಾಖಲಿಸಿ, ಮಾಧ್ಯಮಗಳ ಮೂಲಕ ಕೆಸರೆರಾಚಾಟದ ಮೂಲಕ ಪ್ರಚಾರ ಪಡೆದಿದ್ದು ವಿಶೇಷ.
ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲುಗೆ ಭವಿಷ್ಯತ್ತಿನ ರಾಜಕೀಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಚುನಾವಣೆ. ಹಾಗಾಗಿ ಈ ಸಮಯದಲ್ಲಿ ಹಗಲು ರಾತ್ರಿ ಪ್ರಚಾರ ಸಭೆ, ಚುನಾವಣೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಶ್ರೀರಾಮುಲುರನ್ನು ಸೋಲಿಸಿದರೆ, ಮುಂದಿನ ಕೆಲವು ವರ್ಷಗಳವರೆಗೆ ಜಿಲ್ಲೆಯಲ್ಲಿ ಪಕ್ಷಕ್ಕೆ ಪ್ರಬಲ ಎದುರಾಳಿ ಇಲ್ಲವಾಗುತ್ತದೆ. ಲೋಕಸಭಾ ಕ್ಷೇತ್ರದಲ್ಲಿ ಕಳಕೊಂಡ ಹಿಡಿತ ಸಾಧಿಸಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಚಾರವನ್ನು ಬಿರುಸಿನಿಂದ ಕೈಗೊಂಡಿದೆ. ಆದರೆ, ಮತದಾರರ ಒಲವು ಯಾವ ಪಕ್ಷದ ಪರವಿದೆ ಎಂಬುದನ್ನು ತಿಳಿಯುವುದು ಕಷ್ಟ.
ಆರೋಪ, ಪ್ರತ್ಯಾರೋಪ: ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಲು ಮುಂದಾಗಿದ್ದಾರೆ, ಕಾಂಗ್ರೆಸ್ ತನ್ನೆಲ್ಲ ಭಿನ್ನಮತ ಮಧ್ಯೆ ಪಕ್ಷದ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಮುಖಂಡರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಅವರ ಮನೆಗೆ ದಾಳಿ ಮಾಡುತ್ತಿದ್ದಾರೆಂಬ ಆರೋಪಗಳನ್ನು ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಆರೋಪಿಸಿ ಚುನಾವಣಾಧಿಕಾರಿಗಳ ಕಾರ್ಯವೈಖರಿ ಖಂಡಿಸಿದ್ದಾರೆ.
ಆಮಿಷ ಕಾಲ ಸನ್ನಿಹಿತ, ಅಧಿಕಾರಿಗಳಿಗೆ ಸವಾಲು: ಇಲ್ಲಿವರೆಗೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟು ದಾಳಿ ಮಾಡಿ ಕುರುಡು ಕಾಂಚಾಣ ಕರಾಮತ್ತು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಿತು. ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಬಿಗಿ ಭದ್ರತೆ ಏರ್ಪಡಿಸಿತ್ತು. ಕತ್ತಲ ಕರಾಮತ್ತು ತಡೆಯಲು ಚುನಾವಣಾಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಈ ಹಿಂದೆ ಚುನಾವಣೆಗಳಲ್ಲಿ ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ, ಕತ್ತಲು ರಾತ್ರಿ ಕರಾಮತ್ತು ಮೆರೆಯುವವರು ರಂಗೋಲಿ ಕೆಳಗೆ ತೂರಿದ್ದರು. ಈ ಬಾರಿ ಏನಾಗುತ್ತೋ?
- ಶಶಿಧರ ಮೇಟಿ