ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೋಟಿ ಮೌಲ್ಯದ ಚಿನ್ನ ಪತ್ತೆ

Lingaraj Badiger
Updated On : 16 Apr 2014, 1:46 am

ಹೊಸಪೇಟೆ: ನಗರದ ಮೇನ್ ಬಜಾರ್‌ನಲ್ಲಿರುವ ನಾಹರ್ ಜ್ಯುವೆಲರ್ಸ್‌ನಲ್ಲಿ ಮಂಗಳವಾರ ರು. 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ತೆರಿಗೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸುಮಾರು 60 ಎಕರೆ ಕೃಷಿಯೇತರ ಭೂಮಿಯ ದಾಖಲೆಪತ್ರಗಳನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ನಾಹರ್ ಜ್ಯುವೆಲರ್ಸ್ ಹಾಗೂ ಅದರ ಮಾಲೀಕ ಭವರ್‌ಲಾಲ್ ಜೈನ್ ಮನೆ ಮೇಲೆ ಸೋಮವಾರ ರಾತ್ರಿ ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಒಟ್ಟು ರು. 41 ಲಕ್ಷ ನಗದು ಪತ್ತೆಯಾಗಿದ್ದು, ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಡೀ ರಾತ್ರಿ ದಾಖಲೆಗಳನ್ನು ಪರಿಶೀಲಿಸಿದರು. ರು. 35 ಲಕ್ಷಕ್ಕೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಅಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ. ನಾಹರ್ ಜ್ಯುವೆಲರ್ಸ್ ಮಾಲೀಕ ಭವರ್‌ಲಾಲ್ ಜೈನ್ ಮನೆ, ಮ್ಯಾನೇಜರ್ ರವಿ, ಅಂಗಡಿಯ ಕೆಲಸಗಾರರ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ.
ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್, ತಹಸೀಲ್ದಾರ್ ರಮೇಶ್ ಕೋನರಡ್ಡಿ, ನಗರಸಭೆ ಪೌರಾಯುಕ್ತ ಮಹಮ್ಮದ್ ಮುನೀರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಷಿ, ಪೊಲೀಸ್ ಇಲಾಖೆ ಅಧಿಕಾರಿಗಳು, ವಾಣಿಜ್ಯ ತೆರಿಗೆ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement