ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮುಕ್ತ ಮತದಾನಕ್ಕೆ ಸಕಲ ಸಿದ್ಧತೆ

Lingaraj Badiger
Updated On : 16 Apr 2014, 1:42 am

ಬಳ್ಳಾರಿ:  ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಏ. 17ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರು ಮುಕ್ತವಾಗಿ ಮತದಾನ ಮಾಡಲು ಜಿಲ್ಲಾದ್ಯಂತ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಒಟ್ಟು 1666644 ಮತದಾರರ ಪೈಕಿ ಸಿರುಗುಪ್ಪ ಹೊರತುಪಡಿಸಿ 1487661 ಮತದಾರರನ್ನು ಹೊಂದಿದೆ. 7,50,587 ಪುರುಷ, 7,36,921 ಮಹಿಳೆ, 150 ಇತರೆ ಮತದಾರರಿದ್ದಾರೆ. ಈ ಪೈಕಿ ಶೇ. 99.77 ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾಡ್)ಯುಳ್ಳ ಮತದಾರರು. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ಜರುಗಲಿದೆ. ಪ್ರತಿ ಮತದಾರ ಮುಕ್ತ, ನಿರ್ಭಯವಾಗಿ ಮತಕೇಂದ್ರಕ್ಕೆ ಬಂದು ಮತ ಚಲಾಯಿಸಬೇಕೆಂದರು.
ಜಿಲ್ಲೆಯ ಒಟ್ಟು 1896 ಮತಗಟ್ಟೆಗಳ ಪೈಕಿ ಸಿರುಗುಪ್ಪ ಬಿಟ್ಟು, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1692 ಮತಗಟ್ಟೆಗಳು ಬರಲಿವೆ. ಈ ಪೈಕಿ 12 ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಜಯನಗರ 2, ಬಳ್ಳಾರಿ ಗ್ರಾಮೀಣ 3, ಬಳ್ಳಾರಿ ನಗರ 5, ಸಂಡೂರಲ್ಲಿ 2 ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಮತದಾರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದು, ವೃದ್ಧರು, ಮಕ್ಕಳೊಂದಿಗೆ ಬರುವ ತಾಯಂದಿರಿಗೆ ಆಸನಗಳು, ಹವಾನಿಯಂತ್ರಿತ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. 8 ಮತಗಟ್ಟೆಗಳಲ್ಲಿ ಅಂತರ್ಜಾಲ ವ್ಯವಸ್ಥೆ ಕಲ್ಪಿಸಿದ್ದು, ಮತದಾನ ಬಿಟ್ಟು, ಉಳಿದ ಎಲ್ಲವನ್ನೂ ಈ ಮೂಲಕ ಅಂತರ್ಜಾಲದಲ್ಲಿ ವೀಕ್ಷಿಸಬಹುದು ಎಂದರು.
ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಬಳ್ಳಾರಿ ನಗರದ 15 ಸ್ಥಳಗಳಲ್ಲಿ 45 ಕ್ಯಾಮೆರಾ, ಹೊಸಪೇಟೆ 8 ಕಡೆ 17 ಕ್ಯಾಮೆರಾ, ಕಂಪ್ಲಿ 4 ಕಡೆ 12 ಕ್ಯಾಮೆರಾ ಸೇರಿ ಒಟ್ಟು 74 ಕ್ಯಾಮೆರಾಗಳನ್ನು ಅಳವಡಿಸಿದೆ. ನಿಯಂತ್ರಣ ಕೊಠಡಿಯಲ್ಲಿ ಏಕಕಾಲದಲ್ಲಿ ವೀಕ್ಷಿಸುವ ಸೌಲಭ್ಯ ಕಲ್ಪಿಸಿದೆ ಎಂದರು.
ಸಿರುಗುಪ್ಪ ಸೇರಿದಂತೆ ಒಟ್ಟು 8724 ಮತಗಟ್ಟೆ ಸಿಬ್ಬಂದಿ, 524 ಮೈಕ್ರೋ ಆಬ್ಸ್‌ರ್ವರ್ ಸಿಬ್ಬಂದಿ, 6465 ಪೊಲೀಸ್ ಸಿಬ್ಬಂದಿ, 9 ಡಿವೈಎಸ್ಪಿ, 26 ಸಿಪಿಐ, 144 ವಿಡಿಯೋ ಗ್ರಾಫರ್, 635 ಪ್ಯಾರಾ ಮಿಲಿಟರಿ ಸಿಬ್ಬಂದಿ, 763 ಗೃಹರಕ್ಷಕ ಸಿಬ್ಬಂದಿಯನ್ನು ಚುನಾವಣೆಗೆ ನಿಯೋಜಿಸಲಾಗಿದೆ. ಚುನಾವಣಾ ಕಾರ್ಯಕ್ಕಾಗಿ 279 ಕೆಎಸ್ಸಾರ್ಟಿಸಿ ಬಸ್‌ಗಳು, 26 ಖಾಸಗಿ ಬಸ್, 56 ಮಿನಿಬಸ್‌ಗಳು, 120 ಟ್ರ್ಯಾಕ್ಸ್, ಜೀಪ್, ಮಾಕ್ಸಿಕ್ಯಾಬ್ ಸೇರಿ 481 ವಾಹಗಳಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಶಾಂತಿಯುತ ಮತದಾನಕ್ಕೆ ಎಲ್ಲ ಭದ್ರತೆ ಕ್ರಮಗಳನ್ನು ಕೈಗೊಂಡಿದೆ. 695 ಮತಗಟ್ಟೆಗಳನ್ನು ನಾನ್ ಕ್ರಿಟಿಕಲ್ (ಸೂಕ್ಷ್ಮ) ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅದಕ್ಕಾಗಿ 5465 ಪೊಲೀಸ್ ಸಿಬ್ಬಂದಿ, 635 ಅರೆ ಸೇನಾಪಡೆ ಸಿಬ್ಬಂದಿ, 763 ಗೃಹರಕ್ಷಕ ದಳ ಸಿಬ್ಬಂದಿ ನೇಮಿಸಿದೆ ಎಂದರು.
ಲೋಕಸಭೆ ಚುನಾವಣೆ ನಿಮಿತ್ತ ಒಟ್ಟು 30 ಪ್ರಕರಣ ದಾಖಲಿಸಿದ್ದು, ರು. 10.9 ಕೋಟಿ ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆಯಿಂದ ರು. 11 ಲಕ್ಷ ಮೌಲ್ಯದ 600 ಲೀ. ಮದ್ಯ, 60 ಲೀ. ಬಿಯರ್, 79.65 ಲೀ. ಸೇಂದಿ ಜಪ್ತಿ ಮಾಡಿಕೊಂಡು 90 ಪ್ರಕರಣ ದಾಖಲಿಸಿ, 78 ಜನರನ್ನು ಬಂಧಿಸಿದೆ ಎಂದರು.
ಕಾನೂನು-ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಸಿ ಕಾಯ್ದೆಯಡಿ 511 ಪ್ರಕರಣ ದಾಖಲಾಗಿದ್ದು, ಗೂಂಡಾ ಕಾಯ್ದೆಯಡಿ 6 ಜನರನ್ನು ಬಂಧಿಸಲಾಗಿದೆ. ಮೂವರನ್ನು ಗಡಿಪಾರು ಮಾಡಲಾಗಿದೆ. ಒಂದು ಕಿ.ಮೀ. ದೂರದ ಜಿಲ್ಲೆಯ 27 ಮತಗಟ್ಟೆಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement