ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಂಪಿ: ವಿಜೃಂಭಣೆಯ ಜೋಡಿ ರಥೋತ್ಸವ

Lingaraj Badiger
Updated On : 16 Apr 2014, 1:42 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 15
ವಿಶ್ವವಿಖ್ಯಾತ ಹಂಪಿಯಲ್ಲಿ ಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಹಂಪಿ ವಿರೂಪಾಕ್ಷ ಪೀಠಾಧೀಶ್ವರರ ಸಹಿತವಾದ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ವೈಭವದಿಂದ ಮಂಗಳವಾರ ಸಂಜೆ ನಡೆಯಿತು.
ರಥೋತ್ಸವದ ಅಂಗವಾಗಿ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಚಂದ್ರಮೌಳೇಶ್ವರಸ್ವಾಮಿ, ಹಂಪಿಯ ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವಿರೂಪಾಕ್ಷೇಶ್ವರ ಸ್ವಾಮಿಗೆ ಕೃಷ್ಣದೇವರಾಯ ಸಮರ್ಪಿಸಿರುವ ನವರತ್ನ ಖಚಿತ ಸುವರ್ಣಮುಖ ಕಿರೀಟದೊಂದಿಗೆ ಅಲಂಕರಿಸಲಾಗಿತ್ತು. ಪಂಪಾದೇವಿಗೆ ಮತ್ತು ತಾಯಿ ಭುವನೇಶ್ವರಿ ದೇವಿಯನ್ನು ಬಂಗಾರದ ಕಿರೀಟಗಳು, ಹಸ್ತಗಳು, ಕರ್ಣ ಕುಂಡಲ, ಇತರ ಬಂಗಾರದ ಆಭರಣಗಳಿಂದ ಅಂಕರಿಸಲಾಗಿತ್ತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಬೆಳಗ್ಗೆ 10 ಗಂಟೆಗೆ ಹಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧೀಶ್ವರರ ನವರತ್ನ ಖಚಿತ ಕಿರೀಟದೊಂದಿಗೆ ಅವರ ಆರಾಧ್ಯ ದೈವವಾದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದ ಮಡಿ ತೇರು ಎಳೆಯಲಾಯಿತು. ಸಂಜೆ 5 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಹಾಗೂ ಸಾರ್ವಜನಿಕರು ವಿರೂಪಾಕ್ಷೇಶ್ವರ ಸ್ವಾಮಿಗೆ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ  ರಥ ಎಳೆದರು.
ಅನೇಕ ವರ್ಷಗಳಿಂದ ಪರಂಪರಾಗತವಾಗಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವದಲ್ಲಿ ರಥದ ಒಂದು ಕಡೆ ಹೊಸಪೇಟೆ ನಾಯಕ ಸಮುದಾಯ, ಮತ್ತೊಂದು ಕಡೆ ಕಮಲಾಪುರ ನಾಯಕ ಸಮುದಾಯದವರು ಗಾಲಿಗೆ ಸನ್ನೆ ಹಾಕುತ್ತ ಬರುತ್ತಿದ್ದು, ಈ ವರ್ಷವೂ ಕೈಂಕರ್ಯ ಪೂರೈಸಿದರು. ಜೋಡಿ ರಥವನ್ನು ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಮುಂದಿನ ಬಜಾರ್ ಮೂಲಕ ಎದುರು ಬಸವಣ್ಣ ಮಂಟಪದ ಬಳಿ ತೆರಳಿ, ಅನಂತರ ವಾಪಾಸ್ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಸಮೀಪಕ್ಕೆ ತಂದು ನಿಲ್ಲಿಸಲಾಯಿತು.
ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು ಹಕ್ಕಬುಕ್ಕರು ನೀಡಿರುವ ಬಂಗಾರದ ಕಿರೀಟ ಧರಿಸಿ, ರಥೋತ್ಸವದಲ್ಲಿ ಭಾಗವಹಿಸಿದ್ದರು. ಡಿವೈಎಸ್‌ಪಿ ನಾಗರಾಜ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement