ಗಣಿನಾಡ ಗದ್ದುಗೆ ಕಸರತ್ತು
ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಸ್ವಾಭಿಮಾನಕ್ಕಾಗಿ ಬಿಎಸ್ಸಾರ್ ಕಟ್ಟಿ, ಬಿಜೆಪಿಗೆ ಮರಳಿ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವ ಶ್ರೀರಾಮುಲು ಲೋಕಸಭೆ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆಯಲು ಸಿದ್ಧರಾಗಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಸೋಲು-ಗೆಲುವಿಗಿಂತ ಶ್ರೀರಾಮುಲು ಗೆಲ್ಲುತ್ತಾರೋ ಎಂಬ ಚರ್ಚೆಯೇ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಶಕ್ತಿ ಕೇಂದ್ರವಾಗಿದ್ದ ಗಣಿನಾಡಿನ ರಾಜಕೀಯ ಮುಖಂಡರ ಭವಿಷ್ಯವನ್ನು ಈಗ ಬಳ್ಳಾರಿ ಮತದಾರರು ನಿರ್ಧರಿಸುತ್ತಿದ್ದಾರೆ ಎಂಬುದು ವಿಶೇಷ.
ಎರಡು ಪಕ್ಷಗಳ ಕಸರತ್ತು: ಶ್ರೀರಾಮುಲು ರಾಜಕೀಯ ಅಸ್ತಿತ್ವ ಹಾಗೂ ಭವಿಷ್ಯಕ್ಕಾಗಿ ಸ್ಪರ್ಧಿಸಿದ್ದು, ಗೆಲವಿಗಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರೋಧಿಸಿ ನಡೆಸಿದ ಪಾದಯಾತ್ರೆ ಮೂಲಕ ಹೊಸ ಜೀವ ಪಡೆದಿರುವ ಕಾಂಗ್ರೆಸ್ ಈಗ ತನ್ನ ಕೋಟೆ ಗಟ್ಟಿ ಮಾಡಿಕೊಳ್ಳಲು ಹೆಣಗಾಡುತ್ತಿದೆ. ಜೆಡಿಎಸ್, ಆಮ್ ಆದ್ಮಿ, ಎಸ್‌ಯುಸಿಐ ಸೇರಿ 12 ಅಭ್ಯರ್ಥಿಗಳು ಕಣದಲ್ಲಿರುವುದು ಬಿಜೆಪಿ, ಕಾಂಗ್ರೆಸ್‌ಗೆ ತಲೆನೋವಾಗಿದೆ.
ಗೆಲವು ಅಷ್ಟು ಸುಲಭವಲ್ಲ: ಬಳ್ಳಾರಿ ಕ್ಷೇತ್ರವನ್ನು ಬಿಜೆಪಿ ಮುಷ್ಟಿಯಿಂದ ಕಸಿದುಕೊಳ್ಳಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಮತದಾರರನ್ನು ಸೆಳೆಯಲು ಅಬ್ಬರದ ಪ್ರಚಾರ ಮಾಡಿದೆ. ಶ್ರೀರಾಮುಲು ಕೂಡ ಬಿಡುವಿಲ್ಲದೆ ಸುತ್ತಾಡಿ, ಪ್ರಚಾರ ಮಾಡಿದ್ದಾರೆ. ಕ್ಷೇತ್ರದ ಮತದಾರ ಶ್ರೀರಾಮುಲು ಗೆಲ್ಲಿಸಿ ಅವರ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡುವರೋ ಅಥವಾ ಎನ್.ವೈ. ಹನುಮಂತಪ್ಪ ಅವರನ್ನು ಆರಿಸಿ, ಕಾಂಗ್ರೆಸ್ ಭದ್ರಕೋಟೆ ಮರುಸ್ಥಾಪನೆಗೆ ಸಹಕರಿಸುತ್ತಾರೋ ಎಂಬ ಕುತೂಹಲವಿದೆ.
ಸೋಲು-ಗೆಲವು ನಿರ್ಧರಿಸುವ ಅಭ್ಯರ್ಥಿಗಳು: ಕಾಂಗ್ರೆಸ್-ಬಿಜೆಪಿಯಲ್ಲಿ ಯಾರು ಗೆದ್ದರೂ, ದೊಡ್ಡ ಅಂತರ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಕಣದಲ್ಲಿರುವ ಜೆಡಿಎಸ್, ಆಮ್ ಆದ್ಮಿ, ಎಸ್‌ಯುಸಿಐ, ಬಿಎಸ್ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳು ಫಲಿತಾಂಶವನ್ನು ಬದಲಿಸಬಲ್ಲವು. ಜೆಡಿಎಸ್ ಪಡೆಯುವ ಮತಗಳು ಬಿಜೆಪಿಗೆ ವರದಾನವಾದರೆ, ಆಪ್ ಗಳಿಸುವ ಮತಗಳು ಕಾಂಗ್ರೆಸ್‌ಗೆ ವರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕ್ಯಾಂಪೇನ್ ವರ್ಕ್‌ಔಟ್ ಆಗುತ್ತಾ?: ಕ್ಷೇತ್ರದಲ್ಲಿ ಬಹುಸಂಖ್ಯಾತ ಬಹುಮತದಾರರಿರುವ ಸಮಾಜ ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿವೆ. ಕ್ಷೇತ್ರದಲ್ಲಿ 2.25 ಲಕ್ಷ ಮತದಾರರಿರುವ ಲಿಂಗಾಯತ ಸಮುದಾಯ ಸೆಳೆಯಲು ಯಡಿಯೂರಪ್ಪ ಅವರನ್ನು ಕರೆಸಿ, ಪ್ರಚಾರ ಮಾಡಿಸಿದ್ದಾರೆ. 1.75 ಲಕ್ಷದಷ್ಟಿರುವ ಕುರುಬ ಸಮಾಜದ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮ ಏರ್ಪಡಿಸಿತ್ತು. ಬಿಜೆಪಿ ಈಶ್ವರಪ್ಪ ಅವರನ್ನು ಕರೆಸಿ ಪ್ರಚಾರ ಮಾಡಿದೆ. ಮೋದಿ ಅಲೆಗೆ ಪ್ರತಿಯಾಗಿ ರಾಹುಲ್ ಅಲೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ಸಿಂಗ್, ಚಿತ್ರನಟಿ ಶ್ರುತಿ ಪ್ರಚಾರ ಮಾಡಿದರು. ಸ್ಟಾರ್ ಕ್ಯಾಂಪೇನರ್‌ಗಳ ಪ್ರಚಾರ ಪಕ್ಷಗಳಿಗೆ ಎಷ್ಟು ಪ್ರಮಾಣದಲ್ಲಿ ವರ್ಕೌಟ್ ಆಗಿದೆ ಎಂಬುದನ್ನು ಫಲಿತಾಂಶದಿಂದಲೇ ತಿಳಿಯಬೇಕಾಗಿದೆ.
ಬಸವಳಿದ ಅರೆಸೇನಾ ಪಡೆ
ಚುನಾವಣೆ ಭದ್ರತೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಆಗಮಿಸಿರುವ ಅರೆಸೇನಾ ಪಡೆ ಇಲ್ಲಿನ ಉರಿ ಬಿಸಿಲಿಗೆ ಬಸವಳಿದಿದೆ. ತಾಪ ತಾಳಲಾರದೆ, ಕಲ್ಲಂಗಡಿ, ತಂಪು ಪಾನಿಯಗಳಿಗೆ ಮೊರೆಹೋದ ದೃಶ್ಯಗಳು ಸಾಮಾನ್ಯವಾಗಿದ್ದವು. ಪಶ್ಚಿಮ ಬಂಗಾಳ, ಮೈಸೂರು, ಬೆಂಗಳೂರಿನಿಂದ ಬಂದಿರುವ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಪೋರ್ಸ್ (ಸಿಐಎಸ್‌ಎಫ್) ಬಳ್ಳಾರಿ ಬಿಸಿಲಿಗೆ ಬಸವಳದಿದೆ.
-ಶಶಿಧರ ಮೇಟಿ