ಲೋಕ ಮತದಾನಕ್ಕೆ ಸಕಲ ಸಿದ್ಧತೆ
ಬಳ್ಳಾರಿ: ಗಣಿನಾಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಸಿದ್ಧತೆ ಭರದಿಂದ ಸಾಗಿದೆ. ಮಾದರಿ ಮತಕ್ಷೇತ್ರಗಳ ಸಿದ್ಧತೆ, ಮತದಾನಕ್ಕೆ ಪೊಲೀಸ್ ಭದ್ರತೆ, ಚುನಾವಣಾಧಿಕಾರಿಗಳು ಮತದಾನ ಕುರಿತ ಸಿಬ್ಬಂದಿಯನ್ನು ಆಯಾ ಬೂತ್ಗೆ ಮತಯಂತ್ರಗಳ ಜತೆ ಕಳಿಸುವ ಜವಾಬ್ದಾರಿ, ಮತದಾರರು ಯಾವ ಪಕ್ಷಕ್ಕೆ ಮತ ಹಾಕಬೇಕೆಂಬ ಚಿಂತನೆ ನಡೆದಿದೆ.
ರಾಜಕೀಯ ಪಕ್ಷಗಳು ಯಾವ ಬೂತ್ಗಳಲ್ಲಿ ಏಜೆಂಟ್ ಕೂಡಿಸಬೇಕು, ಕೊನೆ ಹಂತದಲ್ಲಿ ಮನೆಗಳಿಗೆ ತೆರಳಿ ಮತ ಪಡೆಯುವ ಕಸರತ್ತು ನಡೆಸುವ ವಿಚಾರವೆಲ್ಲ ಲೋಕಸಭಾ ಕ್ಷೇತ್ರದ 17ನೇ ಚುನಾವಣೆಗೆ ಬಳ್ಳಾರಿ ಕ್ಷೇತ್ರದಲ್ಲಿ ಬುಧವಾರ ನಡೆದ ಸಿದ್ಧತೆ ಪರಿ.
ರಾಜಕೀಯದಲ್ಲಿ ಬಳ್ಳಾರಿ ಜಿಲ್ಲೆ ತನ್ನೆದೆಛಾಪು ಮೂಡಿಸಿದ ಕ್ಷೇತ್ರ. ಕ್ಷೇತ್ರದಲ್ಲಿ ಮಂಗಳವಾರ ಸಂಜೆವರೆಗೆ ಬಹಿರಂಗ ಪ್ರಚಾರ ನಡೆಯಿತು. ಬುಧವಾರ ಬೆಳಗ್ಗೆಯಿಂದಲೇ ರಾಜಕೀಯ ಪಕ್ಷಗಳು ಮನೆ ಬಾಗಿಲಿಗೆ ತೆರಳಿ ಮತದಾರರ ಮನವೊಲಿಸುವ ಪ್ರಯತ್ನವನ್ನು ಎಲ್ಲ ಪಕ್ಷದವರು ಮಾಡಿದರು. ಎಲ್ಲ ಪ್ರಚಾರಕ್ಕಿಂತಲೂ ಕೊನೆ 2 ದಿನಗಳ ಪ್ರಚಾರ ಮುಖ್ಯ ಎನ್ನುವಂತೆ ಸಾಧ್ಯವಾದಷ್ಟು ಮಟ್ಟಿಗೆ ಆಯಾ ಪಕ್ಷಗಳ ಅಭ್ಯರ್ಥಿಗಳು, ಹಿಂಬಾಲಕರು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುವ ಮೂಲಕ ತಮ್ಮ ಅನಿಸಿಕೆ, ರಾಜಕೀಯ ಬೆಳವಣಿಗೆ, ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡಿದರು.
ಚುನಾವಣಾಧಿಕಾರಿಗಳ ಸಿದ್ಧತೆ: ಕ್ಷೇತ್ರದಲ್ಲಿ 14,87,661 ಮತದಾರರು ಮತದಾನ ಮಾಡಲು ಅಗತ್ಯವಾಗಿ ಬೇಕಾದ 2640 ಬ್ಯಾಲೆಟ್ ಯೂನಿಟ್ ಹಾಗೂ 2032 ಕಂಟ್ರೋಲ್ ಯೂನಿಟ್ ಯಂತ್ರಗಳನ್ನು ಬಳ್ಳಾರಿ ನಗರದ ಮುನ್ಸಿಪಲ್ ಮೈದಾನ್ ಸೇರಿದಂತೆ ಇತರ ಕಡೆಗಳಲ್ಲಿ ಸಿಬ್ಬಂದಿಗೆ ಯಂತ್ರಗಳು ಹಾಗೂ ಮತದಾನಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮಾಡಲಾಗಿತ್ತು. ಚುನಾವಣಾಧಿಕಾರಿ ಇದರೊಂದಿಗೆ ಆಯಾ ಮತದಾನ ಕೇಂದ್ರಕ್ಕೆ ಬೇಕಾಗುವ ಸಿದ್ಧತೆಯಲ್ಲಿ ತೊಡಗಿದ್ದರು.
ಮಾದರಿ ಮತಗಟ್ಟೆ ವೆಬ್ ಕಾಸ್ಟಿಂಗ್ ವ್ಯವಸ್ಥೆ: ಚುನಾವಣಾಧಿಕಾರಿಗಳು ಈ ಬಾರಿ ಮಾದರಿ ಮತಗಟ್ಟೆ ಹಾಗೂ ವೆಬ್ಕಾಸ್ಟಿಂಗ್ ವ್ಯವಸ್ಥೆಯನ್ನು ವಿಶೇಷವಾಗಿ ಮಾಡಿದ್ದಾರೆ. ಹೊಸಪೇಟೆಯ ಹುಡಾ ಕಚೇರಿ, ನಗರಸಭೆ ಕೊಠಡಿಯ ಎರಡು ಮತಗಟ್ಟೆಗಳಲ್ಲಿ, ಬಳ್ಳಾರಿ ಕೋಟೆ ಪ್ರದೇಶದ ತಾಪಂನಲ್ಲಿ 3 ಮತಗಟ್ಟೆ, ಬಳ್ಳಾರಿಯ ಪಾರ್ವತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಮತಗಟ್ಟೆಗಳಲ್ಲಿ, ಬಳ್ಳಾರಿಯ ಸಹಾಯಕ ಕಚೇರಿ, ತಾಲೂಕು ಕಚೇರಿಯ ಕಾಂಪೌಂಡ್ಗಳ ಮತಗಟ್ಟೆ, ತೋರಣಗಲ್ನ ವಿಶಾಲ ಬಾಲವಾಡಿಯ ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆ ವ್ಯವಸ್ಥೆಯಲ್ಲಿ ಚುನಾವಣಾಧಿಕಾರಿಗಳು ತೊಡಗಿಸಿಕೊಂಡಿದ್ದರು. 8 ಕಡೆಗಳಲ್ಲಿ ವೆಬ್ಕಾಸ್ಟಿಂಗ್ ಮತಗಟ್ಟೆಗಳನ್ನು ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು.
ಭದ್ರತಾ ವ್ಯವಸ್ಥೆಯಲ್ಲಿ ಪೊಲೀಸ್ ಬ್ಯುಸಿ: ಪೊಲೀಸ್ ಇಲಾಖೆ ಈ ಚುನಾವಣೆಯಲ್ಲಿ ನಿರ್ಭೀತಿ ಹಾಗೂ ಚುನಾವಣೆಗೆ ಬೇಕಾಗುವ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಗೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, 5119 ಸಿಬ್ಬಂದಿ ನಿಯೋಜಿಸಿದ್ದಾರೆ. ಅಲ್ಲದೆ 635 ಅರೆಸೇನಾ ಪಡೆ, 763 ಗೃಹ ರಕ್ಷಕ ದಳದ ಸೇವೆಯನ್ನು ಎರವಲು ಪಡೆದುಕೊಂಡಿದ್ದಾರೆ. ಹಣ ಹರಿಯುವಿಕೆ ತಡೆಯಲು ಹಗಲು, ರಾತ್ರಿ ಇಲಾಖೆ ಹದ್ದಿನ ಕಣ್ಣಿಟ್ಟಿತ್ತು. ಆದರೂ ಅಲ್ಲಲ್ಲಿ ಕುರುಡು ಕಾಂಚಾಣದ ಕರಾಮತ್ತು ಮಾತ್ರ ಪೊಲೀಸ್ ಇಲಾಖೆ ಹಾಗೂ ಚುನಾಣಾಧಿಕಾರಿಗಳ ಕಣ್ಣುತಪ್ಪಿ ಆಯಿತು. ಆದರೆ, ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಕಡಿಮೆ ಎನ್ನಬಹುದು. ಮತದಾನ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತೆ ನಿಯೋಜಿಸಿದೆ.
ಮತದಾರ, ಪಕ್ಷಗಳು ಸಿದ್ಧತೆ: ಮತದಾನಕ್ಕೆ ಕೇವಲ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ ಸಿದ್ಧತೆಯಲ್ಲಿ ತೊಡಗದೆ, ರಾಜಕೀಯ ಪಕ್ಷಗಳು ಕೂಡ ಯಾವ ಯಾವ ಬೂತ್ಗಳಲ್ಲಿ ತಮ್ಮ ಪಕ್ಷದ ಯಾವ ಏಜೆಂಟ್ರನ್ನು ಕೂಡ್ರಿಸಬೇಕೆಂದು ಏಜೆಂಟ್ ಪಟ್ಟಿ ಸಿದ್ಧತಪಡಿಸಿದರೆ, ಇನ್ನು ಮತದಾರರು ಕೂಡ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರ ಸಂದರ್ಭದಲ್ಲಿ ನೀಡಿರುವ ಆಶ್ವಾಸನೆಗಳು, ಪರಸ್ಪರ ಮಾಡಿಕೊಂಡಿರುವ ಆರೋಪ, ಪ್ರತ್ಯಾರೋಪಗಳು, ಪ್ರಣಾಳಿಕೆಗಳು ಗಣನೆಗೆ ತೆಗೆದುಕೊಂಡು, ಹಿಂದೆ ಮಾಡಿರುವ ಸಾಧನೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ರೀತಿಯ ಲೆಕ್ಕಾಚಾರ ಮಾಡಿಕೊಂಡು ಯಾವ ಪಕ್ಷಕ್ಕೆ ಮತ ಹಾಕಬೇಕೆಂಬ ಚಿಂತನೆ ನಡೆಸಿ, ಮತದಾನಕ್ಕೆ ಸಿದ್ಧವಾಗಿ ನಿಂತಿದ್ದಾನೆ.
ಒಟ್ಟಾರೆ ಏ. 17ರಂದು ನಡೆಯುವ ಲೋಕಸಭೆ ಮಹಾಯುದ್ಧಕ್ಕೆ ಕ್ಷೇತ್ರ ಸಿದ್ಧವಾಗಿದೆ. ಹೆಣ್ಣಿನ ನಡೆ, ನೀರಿನಲ್ಲಿ ಮೀನಿನ ಹೆಜ್ಜೆ ಕಂಡು ಹಿಡಿಯಲು ತೀರಾ ಕಷ್ಟ ಎಂಬ ಗಾದೆ ಮಾತಿನಂತೆ, ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಮನಸ್ಥಿತಿ ಕಂಡು ಹಿಡಿಯಲು ಕಷ್ಟಸಾಧ್ಯವಾದಂಥ ಪರಿಸ್ಥಿತಿ ಇದೆ. ಯಾರ ಬಗ್ಗೆ ಒಲವು ತೋರಿಸುತ್ತಾನೋ ಎಂಬುದು ಕಾದು ನೋಡಬೇಕಾಗಿದೆ.
ಏ. 17ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತದಾನ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯಲಿದೆ. ಮತದಾರರು ಮುಕ್ತ, ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು ಗಂಡು ಹೆಣ್ಣು ಇತರೆ
(ಸಿರುಗುಪ್ಪ ಬಿಟ್ಟು): 14,87,661 7,50,587 7,36,921 153
ಒಟ್ಟು ಪೋಲಿಂಗ್ ಸಿಬ್ಬಂದಿ: 7788
ಒಟ್ಟು ಮೈಕ್ರೋ ಆಬ್ಸ್ರವರ್ ಸಿಬ್ಬಂದಿ: 442
ಒಟ್ಟು ಪೊಲೀಸ್ ಸಿಬ್ಬಂದಿ: 5,119
ಮತದಾನ ಯಂತ್ರಗಳು: ಬಿಯು (ಬ್ಯಾಲೆಟ್ ಯೂನಿಟ್) 2640
ಸಿಯು (ಕಂಟ್ರೋಲ್ ಯೂನಿಟ್) 2032
ಒಟ್ಟು ಪ್ಯಾರಾ ಮಿಲಿಟರಿ ಫೋರ್ಸ್ ಸಿಬ್ಬಂದಿ: 635
ಒಟ್ಟು ಗೃಹರಕ್ಷಕ ದಳದ ಸಿಬ್ಬಂದಿ: 763
ಮತಗಟ್ಟೆಗಳು:
ಬಳ್ಳಾರಿ ಲೋಕಸಭಾ ಕ್ಷೇತ್ರ (ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಬಿಟ್ಟು) 1692
ಮಾದರಿ ಮತಗಟ್ಟೆಗಳು: 12
ಒಟ್ಟು ವೆಬ್ ಕ್ಯಾಸ್ಟಿಂಗ್ 8 ಮತಗಟ್ಟೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ. ಮತದಾನ ಕಾರ್ಯದ ಮೇಲೆ ನಿಗಾ ವಹಿಸಲು ಬಳ್ಳಾರಿ ನಗರದ 15 ಸ್ಥಳಗಳಲ್ಲಿ 45 ಕ್ಯಾಮೆರಾ, ಹೊಸಪೇಟೆಯಲ್ಲಿ 8 ಸ್ಥಳಗಳಲ್ಲಿ 17 ಕ್ಯಾಮೆರಾ, ಕಂಪ್ಲಿಯ 4 ಸ್ಥಳಗಳಲ್ಲಿ 12 ಕ್ಯಾಮೆರಾ ಸೇರಿ ಒಟ್ಟು 27 ವಿವಿಧ ಸ್ಥಳಗಳಲ್ಲಿ 74 ಕ್ಯಾಮೆರಾಗಳ ಅಳವಡಿಕೆ. ನಿಯಂತ್ರಣ ಕೊಠಡಿಯಲ್ಲಿ ಏಕಕಾಲದಲ್ಲಿ ವೀಕ್ಷಣೆ ಮಾಡಲು ಸೌಲಭ್ಯ.
ಹೆಚ್ಚುವರಿ ಫ್ಲೈಯಿಂಗ್ ಸ್ಕ್ವಾಡ್:
ಬಳ್ಳಾರಿ ನಗರ ಹಾಗೂ ಬಳ್ಳಾರಿ ವಿಧಾನಸಭಾ ಕ್ಷೇತ್ರಗಳಿಗೆ 11 ಹೆಚ್ಚುವರಿ ಸರ್ವೇಲೆನ್ಸ್ ತಂಡಗಳ ನೇಮಕ.
ಚುನಾವಣಾ ಕಾರ್ಯಕ್ಕಾಗಿ 279 ಕೆಎಸ್ಆರ್ಟಿಸಿ ಬಸ್ಗಳು, 26 ಖಾಸಗಿ ಬಸ್, 56 ಮಿನಿಬಸ್ಗಳು, 120 ಟ್ರ್ಯಾಕ್ಸ್, ಜೀಪ್, ಮ್ಯಾಕ್ಸಿಕ್ಯಾಬ್ ಸೇರಿ 481 ವಾಹನಗಳ ಬಳಕೆ.
ಬಳ್ಳಾರಿ ಕ್ಷೇತ್ರದಲ್ಲಿ ಮಾದರಿ, ವೆಬ್ಕ್ಯಾಸ್ಟಿಂಗ್ ಮತಗಟ್ಟೆ
ಬಳ್ಳಾರಿ: ಜಿಲ್ಲೆಯಲ್ಲಿ 12 ಮಾದರಿ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಕೂಲರ್, ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪುರುಷ ಮತ್ತು ಮಹಿಳಾ ಮತದಾರರಿಗೆ ಪ್ರತ್ಯೇಕ ಬ್ಯಾರಿಕೇಡಿಂಗ್, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು, ನೆರಳಿಗಾಗಿ ಶಾಮಿಯಾನ, ಶೌಚಾಲಯ, ಮತಗಟ್ಟೆ ಸಿಬ್ಬಂದಿಗೆ ರಾತ್ರಿ ವೇಳೆ ಮಲಗಲು ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೆಬ್ ಕ್ಯಾಮೆರಾ ಅಳವಡಿಸಿದ ಮತಗಟ್ಟೆಗಳನ್ನು ಚುನಾವಣಾಧಿಕಾರಿಗಳು ಅಥವಾ ರಾಜ್ಯ ಚುನಾವಣಾ ಆಯೋಗವು ತನ್ನ ಕಚೇರಿಯಿಂದಲೇ ಪರಿಶೀಲಿಸಬಹುದಾಗಿದೆ.