ಹಲ್ಲೆ ಯತ್ನ ಕಾಂಗ್ರೆಸ್ ದೌರ್ಜನ್ಯದ ಪರಮಾವಧಿ
ಬಳ್ಳಾರಿ: ಮಾಧ್ಯಮದವರ ಮೇಲೆ ಪೊಲೀಸರು ಹಲ್ಲೆ ನಡೆಸಲು ಯತ್ನಿಸಿರುವುದು ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ಪರಮಾವಧಿಯಾಗಿದೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಹವಂಬಾವಿ ಸರ್ಕಾರಿ ಶಾಲೆ 5ನೇ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಮತ ಚಲಾಯಿಸಿ, ದೇವಿನಗರದ 48ನೇ ಮತಗಟ್ಟೆಯಲ್ಲಿ ಶ್ರೀರಾಮುಲು ಮತ ಚಲಾಯಿಸುತ್ತಿದ್ದಾಗ ಮಾಧ್ಯಮದವರ ಮೇಲೆ ಹರಿಹಾಯ್ದ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಬೆಂಗಳೂರಿನಲ್ಲಿ ಸಚಿವರ ಮೇಲೂ ಹೀಗೆ ವರ್ತಿಸುತ್ತಿದ್ದು, ಇಲ್ಲಿನ ಕೌಲ್ಬಜಾರ್ನಲ್ಲೂ ಅದೇ ಸ್ಥಿತಿ ಇದೆ. ಅವರ ದೌರ್ಜನ್ಯದಿಂದ ಮತದಾರರು ಮನೆಯಿಂದ ಹೊರ ಬಂದು ಮತ ಚಲಾಯಿಸಲು ಭಯಪಡುತ್ತಿದ್ದಾರೆ. ಸಂವಿಧಾನದ 4ನೇ ಅಂಗ, ಪ್ರಜಾಪ್ರಭುತ್ವದ ದೊಡ್ಡ ಆಸ್ತಿಯಾದ ಮಾಧ್ಯಮಗಳ ಮೇಲೂ ಅಧಿಕಾರಿಗಳು ಹಲ್ಲೆ ಮಾಡುತ್ತಿರುವುದು, ಶ್ರೀರಾಮುಲು ಗೆಲವು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ನವರು ಅಧಿಕಾರಿಗಳಿಂದ ಈ ರೀತಿ ವರ್ತಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಬಿಜೆಪಿ ಆಡಳಿತ ಅವಧಿಯಲ್ಲೇ ಜಿಲ್ಲೆ, ರಾಜ್ಯದಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ಜರುಗಿದ್ದು, ಅವುಗಳೇ ಶ್ರೀರಾಮುಲು ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದರು.