ಕಾಂಗ್ರೆಸ್, ಬಿಜೆಪಿ ಪರ ಬೆಟ್ಟಿಂಗ್ ಜೋರು
ಹಗರಿಬೊಮ್ಮನಹಳ್ಳಿ: ಲೋಕಸಭಾ ಚುನಾವಣೆಗೆ ಮತದಾನ ಮುಗಿದು 24 ಗಂಟೆ ಕಳೆದಿಲ್ಲ ಆಗಲೇ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಾದ್ಯಂತ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂಬ ಕುರಿತಂತೆ ಬೆಟ್ಟಿಂಗ್ ಶುರುವಾಗಿದೆ.
ಸಂಜೆ ಮತಪೆಟ್ಟಿಗೆಗಳನ್ನು ಭದ್ರವಾಗಿ ಬಳ್ಳಾರಿಯತ್ತ ಕಳಿಸುತ್ತಿದ್ದಂತೆ ಇತ್ತ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟುವವರು ದೊಡ್ಡ ಸಂಖ್ಯೆಯಲ್ಲಿ ಉದಯಿಸಿ ಮೇ 16ರಂದು ಪ್ರಕಟವಾಗುವ ಫಲಿತಾಂಶಕ್ಕೆ ಇಂದೇ ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ.
ವ್ಯಾಪಾರ- ವಹಿವಾಟು ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಬೆಟ್ಟಿಂಗ್ ಜೋರಾಗಿದೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಪಟ್ಟಣ ಖ್ಯಾತಿ ಗಳಿಸಿದೆ. ಅದೇ ರೀತಿ ಚುನಾವಣೆ ಫಲಿತಾಂಶದ ಮೇಲೂ ಬೆಟ್ಟಿಂಗ್ ಕಟ್ಟುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬೆಟ್ಟಿಂಗ್ ಕಟ್ಟಲು ಅಕ್ಕಪಕ್ಕದ ಊರುಗಳಿಂದ ಬಾಜಿದಾರರು ಇಲ್ಲಿಗೆ ಬರುತ್ತಾರೆ ಎಂದರೆ ಹಗರಿಬೊಮ್ಮನಹಳ್ಳಿ ಬೆಟ್ಟಿಂಗ್‌ಗೆ ಎನ್ನಬಹುದು.
2004ರಲ್ಲಿ ಸ್ಥಳೀಯ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ವಿಧಾನಸಭೆ, ಲೋಕಸಭಾ ಉಪ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆದ ಉದಾಹರಣೆಗಳಿವೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಜೋರಾಗಿ ಕಾಣಿಸಿಕೊಂಡಿದ್ದು, ಬೆಟ್ಟಿಂಗ್‌ದಾರರಿಗೆ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹಾಟ್ ಫೇವರಿಟ್ ಆಗಿ ಕಾಣುತ್ತಿದ್ದಾರೆ. ಹೀಗಾಗಿ ರಾಮುಲು ಗೆಲ್ಲುತ್ತಾರೆಂದು ಬಾಜಿ ಕಟ್ಟುವವರು ಪಟ್ಟಣದಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಬೆಟ್ಟಿಂಗ್ ಕಟ್ಟಲು ಮುಂದೆ ಬಂದಿದ್ದಾರೆ.
ಲೀಡ್‌ಗೂ ಬೆಟ್ಟಿಂಗ್: ಸೋಲು-ಗೆಲವಿನ ಮೇಲೆ ಬಾಜಿ ನಡೆಯುತ್ತಿದ್ದರೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಲೀಡ್ ಪಡೆಯುತ್ತಾನೆ ಎಂದು ಬಾಜಿ ಕಟ್ಟುವವರು ಇದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿಗೊ, ಕಾಂಗ್ರೆಸ್‌ಗೆ ಒಲಿಯುತ್ತದೆಯೋ ಎಂಬ ಕಾತರ ಬಾಜಿದಾರರಲ್ಲಿ ಉಂಟಾಗಿದೆ.