ಮತಯಂತ್ರದಲ್ಲಿ ಗುಟ್ಟು ಬಚ್ಚಿಟ್ಟ ಮತದಾರ
ಕೂಡ್ಲಿಗಿ: ತಾಲೂಕಾದ್ಯಂತ ತಿಂಗಳಿಂದ ಗರಿಗೆದರಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಚುನಾವಣೆ ಜರುಗಿದ್ದು, ತಾಲೂಕಿನ ಮತದಾರ ಮತಯಂತ್ರದಲ್ಲಿ ತನ್ನ ಗುಟ್ಟನ್ನು ಬಚ್ಚಿಟ್ಟಿದ್ದಾನೆ. ಮತದಾನವಾದ ಲೆಕ್ಕಾಚಾರದಲ್ಲಿ ಕ್ಷೇತ್ರದ ಅಭ್ಯರ್ಥಿಗಳು, ಜನತೆ ತೊಡಗಿದ್ದಾರೆ.
ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಯಷ್ಟು ಆಸಕ್ತಿ ಲೋಕಸಭೆ ಚುನಾವಣೆಗೆ ಸ್ಥಳೀಯ ಮುಖಂಡರಲ್ಲಿ ತುಸು ಕಮ್ಮಿಯೇ ಎನ್ನುವವರು ಇದ್ದಾರೆ. ಆದರೂ, ಕೆಲ ಪ್ರಮುಖ ಮುಖಂಡರ ಅಸ್ತಿತ್ವ, ಹುದ್ದೆಗಳ ಪ್ರತಿಷ್ಠೆಗಾಗಿ ಚುನಾವಣೆಯಲ್ಲಿ ಚುರುಕಾಗಿರುವುದು ಸಾಮಾನ್ಯ. ಪ್ರಚಾರ, ತಂತ್ರ, ಪ್ರತಿತಂತ್ರ, ಕತ್ತಲು ರಾತ್ರಿಯ ಕರಾಮತ್ತು, ಮತದಾನದ ಕೊನೆಯ ಘಟ್ಟ ಮುಗಿದು ಎಲ್ಲ ಮುಖಂಡರು ನಿರಾಳತೆ ಹೊಂದಿದ್ದರೂ ತಮ್ಮ ಹಿಡಿತದ ವ್ಯಾಪ್ತಿಯಲ್ಲಿ ಮತಗಳಿಕೆ ಹೆಚ್ಚುಗಾರಿಕೆ ಸಾಬೀತು ಆಗಲಿದೆಯೋ, ಇಲ್ಲವೋ ಎಂಬ ಆತಂಕ ಬಿಜೆಪಿ, ಕಾಂಗ್ರೆಸ್ ಪ್ರಮುಖರಲ್ಲಿ ಕಾಡುತ್ತಲಿದ್ದು, ಸೋಲು, ಗೆಲವಿನ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ.
ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪನೇ ಗೆಲ್ತಾರೋ ಎನ್ನುವ ಚರ್ಚೆ ಏನೇನಿರ್ಲಿ ಬೆಟ್ಟಿಂಗ್.. ಎಂಬ ಮಾತುಗಳು ಈಗ ಜಗುಲಿಕಟ್ಟೆ, ಹೋಟೆಲ್, ಬಸ್ ನಿಲ್ದಾಣಗಳಲ್ಲಿ ನಾಲ್ಕೈದು ಜನ ಕೂಡಿದ ಸ್ಥಳಗಳಲ್ಲಿ ಮಾಮೂಲಿಯಂತೆ ತೇಲಿ ಬರುತ್ತಿವೆ. ಕೆಲವರು ತಮ್ಮ ಗೆಳೆಯರಿಗೆ ಫೋನ್ ಮಾಡಿ ನಿಮ್ಕಡೆ ಹೆಂಗಾತು ಯಾರಿಗೆ ಲೀಡ್ ಬರಬಹುದು. ಅಲ್ಲೇನೋ ಹೆಚ್ಚು ಬಿಜೆಪಿ ಆಯ್ತಂತೆ ಕೆಲವು ಕಡೆ ಕಾಂಗ್ರೆಸ್ ಲೀಡ್ ಅಂತಿದ್ರಪ್ಪ. ಹೀಗೆ ತರಹೇವಾರಿ ಚರ್ಚೆ, ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಕ್ಷೇತ್ರಾದ್ಯಂತ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಗೆಲವಿನ ಲೆಕ್ಕಾಚಾರದಲ್ಲಿ ಮುಖಂಡರು, ಕಾರ್ಯಕರ್ತರು ತಲ್ಲೀನರಾಗಿದ್ದಾರೆ.
ಮುಖಂಡರ, ಕಾರ್ಯಕರ್ತರ ಲೆಕ್ಕಾಚಾರ, ತೊಳಲಾಟಗಳನ್ನು ನೋಡುವ ಮತದಾರ ಮಾತ್ರ ತಮ್ಮ ಗುಟ್ಟನ್ನು ಮತಯಂತ್ರದಲ್ಲಿ ಭದ್ರವಾಗಿಸಿ ನಸು ನಗುತ್ತಿದ್ದಾನೆ.