ನಿಜ ಸಂಸ್ಕೃತಿಯಿಂದ ಯುವಜನತೆ ವಂಚಿತ
ಬಳ್ಳಾರಿ: ಅನ್ಯ ಸಂಸ್ಕೃತಿಗೆ ಜೋತು ಬೀಳುವ ಮೂಲಕ ಯುವ ಸಮೂಹ ನಿಜವಾದ ಸಂಸ್ಕೃತಿಯಿಂದ ವಂಚಿತವಾಗುತ್ತಿದೆ ಎಂದು ಸುವಿದ್ಯೇಂದ್ರ ತೀರ್ಥ ಶ್ರೀ ಹೇಳಿದರು.
ಇತ್ತೀಚೆಗೆ ಇಲ್ಲಿನ ಶ್ರೀ ಬದರಿ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಶ್ರೀ ಸುಶಮೀಂದ್ರ ತೀರ್ಥ ಆರಾಧನಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಆಚಾರ, ವಿಚಾರ ಸೇರಿದಂತೆ ನಾಡಿನ ನಡೆ, ನುಡಿಯ ಬಗ್ಗೆ, ಪಾಲಕರು ತಿಳಿಯಪಡಿಸಬೇಕು. ದೇಶೀಯ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಒತ್ತು ನೀಡುವಂತೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದ ಅವರು, ಆಧ್ಯಾತ್ಮಿಕ ಚಿಂತನೆ, ಕಾರ್ಯಗಳು ಮಾನಸಿಕ ಒತ್ತಡ ಕಡಿಮೆಗೊಳಿಸುತ್ತವೆ. ಉತ್ತಮ ಕಾರ್ಯ, ನಡೆ, ನುಡಿ, ಪುಸ್ತಕಗಳ ಅಧ್ಯಯನ ಅತ್ಯಗತ್ಯ ಎಂದು ತಿಳಿಸಿದರು.
ಮೂರು ದಿನಗಳ ಆರಾಧಾನೆ ನಿಮಿತ್ತ ದೇವಸ್ಥಾನದಲ್ಲಿ 108 ಕಳಸ ಸ್ಥಾಪನೆ ಮಾಡಿ, ಶ್ರೀಲಕ್ಷ್ಮೀ ಸಹಿತ ಬದರಿ ನಾರಾಯಣ ಸ್ವಾಮಿಗೆ ವಿಶೇಷ ಫಲ ಪಂಚಾಮೃತಾಭಿಷೇಕ, ರಜತ, ರೇಷ್ಮೆ ಅಲಂಕಾರ ಮಾಡಲಾಗಿತ್ತು. ಮಹೋತ್ಸವದಲ್ಲಿ ಖೇಡ ಕೃಷ್ಣಾಚಾರ್ಯ, ಬಾಗಲಕೋಟೆ ಸಂಪಿಗಿ ಆಚಾರ್ಯ, ವೇದವ್ಯಾಸ ಆಚಾರ್ಯ, ಪ್ರಸನ್ನ ಆಚಾರ್ಯ, ಕೃಷ್ಣ ಆಚಾರ್ಯ ಉಪನ್ಯಾಸ ನಡೆಸಿಕೊಟ್ಟರು. ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಗಳ ತುಲಾಭಾರ ನೆರವೇರಿಸಲಾಯಿತು. ಸತ್ಯನಾರಾಯಣ ಆಚಾರ್ಯ, ಗೋವಿಂದ ಆಚಾರ್ಯ ಇತರರಿದ್ದರು.