ಹಳ್ಳಿ, ಪ್ಯಾಟೆಯಲ್ಲಿ ಚುನಾವಣೆ ಚರ್ಚೆ
ಬಳ್ಳಾರಿ ಗ್ರಾಮೀಣ, ನಗರ, ಪಶ್ಚಿಮ ತಾಲೂಕುಗಳಲ್ಲಿ ಕಾಂಗ್ರೆಸ್-ಬಿಜೆಪಿಗೆ ಫುಲ್ ಫೈಟಂತೆ, ಯಾರಂದ್ರಲೆ, ನಾನು ನಿನ್ನೆ ನಮ್ಮ ಮಾಮನ ಊರಿಗೆ ಹೋಗಿದ್ದೆ, ಅಲ್ಲೆಲ್ಲಾ ಬಿಜೆಪಿ ಆಗೈತಂತೆ, ಸುಮ್ನಿರಣ್ಣ ಒಂದು ಊರ್ಯಾನೆಗೆ ಬಿಜೆಪಿ ಇದ್ದರೆ ಆಯ್ತಾ, ಇವತ್ತು ಬೆಳಗ್ಗೆ ನಮ್ಮ ಅಣ್ಣ ಮಗ ಊರ್ಲಿಂದ ಬಂದಿದ್ದ, ಕೇಳಿದರೆ, ನಮ್ಮ ಊರ್ಯಾಗೆ ಅರ್ಧಕ್ಕಿಂತ ಹೆಚ್ಚು ಜನ ಕಾಂಗ್ರೆಸ್ಗೆ ಮಾಡ್ಯಾರೇ ಅಂತಾನೆ. ಹೀಗೆ ಹಳ್ಳಿ ಕಟ್ಟೆಗಳಲ್ಲಿ, ಕ್ಷೇತ್ರದ ನಗರ ಪ್ರದೇಶಗಳಲ್ಲಿ ಚುನಾವಣೆ ಸೋಲು, ಗೆಲವಿನ ಬಗ್ಗೆ ವಿಭಿನ್ನ, ತರಹೇವಾರಿ ಚರ್ಚೆಗಳು ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ. ಚುನಾವಣೆ ಮುಗಿದರೂ, ಜನರು ಚುನಾವಣೆ ಗುಂಗಿನಿಂದ ಮಾತ್ರ ಹೊರ ಬಂದಿಲ್ಲ.
ಗಂಡು ಮಕ್ಕಳು, ಯುವಕರು ಮಾತನಾಡುವುದು ಇರಲಿ, ಮನೆಗಳಲ್ಲಿ ಹೆಣ್ಣು ಮಕ್ಕಳು ಬಟ್ಟೆ ಒಗೆಯುವ ಕಾಲಕ್ಕೆ, ಪಕ್ಕದ ಮನೆ ಹತ್ತಿರ ಸುದ್ದಿ ಹೇಳುವ ಕಾಲಕ್ಕೆ ಚುನಾವಣೆಯ ಸೋಲು-ಗೆಲವಿನ ಲೆಕ್ಕಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಚುನಾವಣೆ ಗುಂಗು ಎಷ್ಟಿರಬಹುದೆಂದು ನೀವೇ ಆಲೋಚಿಸಿ.
ಮತದಾನ ಬಳಿಕ ಬಿಸಿ ಬಿಸಿ ಚರ್ಚೆ: ನಮ್ಮ ಮನ್ಯಾಗೆ ಬಟ್ಟೆ ಒಗೆಯುವಮ್ಮ ಹೇಳ್ದಿಲು, ಅಲ್ಲೆಲ್ಲಾ ಫುಲ್ ಕಾಂಗ್ರೆಸ್ ಅಂತೆ, ಸಿಟಿಯಲ್ಲಿ ಬೇರೆ ಕಡೆಗೆ ಬಿಜೆಪಿ ಐತಂತೆ, ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಹೇಳೋದು ಕಷ್ಟ ಅಂತಾಳೆ ಎಂದು ಮಹಿಳೆಯರು ಕೂಡ ಸುದ್ದಿ ಕೇಳುವ ವಿಷಯ ಸರ್ವೇ ಸಾಮಾನ್ಯವಾಗಿದೆ. ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎನ್ನುವಂತೆ ಚುನಾವಣೆ ಮುಗಿದರು ಆ ಬಗ್ಗೆ ಮಾತುಗಳು ನಿಂತಿಲ್ಲ.
ವಿವಿಧ ಸಂದರ್ಭಗಳಲ್ಲಿ ಚರ್ಚೆ: ಬೆಳಗ್ಗೆ ಎದ್ದು ಪತ್ರಿಕೆ ಓದುವಾಗ, ಹಳ್ಳಿಗಳಲ್ಲಿ ಬೆಳಗ್ಗೆ ಬಹಿರ್ದೆಸೆಗೆ ಹೋದಾಗ, ಹೊಲದಲ್ಲಿ ಕೆಲಸ ಮಾಡುವಾಗ, ನಗರದಲ್ಲಿ ಬೆಳಗಿನ ವಾಯು ವಿಹಾರ ಮಾಡುವಾಗ, ಹೋಟೆಲ್ಗಳಲ್ಲಿ ಕಾಫಿ ಕುಡಿಯುವಾಗ, ಬಸ್ ಸಂಚಾರ, ಸರ್ಕಾರಿ ಕಚೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರಿಗೆ ಯಾರು ಓಟು ಹಾಕಿದ್ದಾರೆ, ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬುದು ನಿತ್ಯದ ಚರ್ಚೆ. ಅವರ ಮಾತುಗಳನ್ನು ಕೇಳುವುದಕ್ಕೆ ಬಲು ಸೊಗಸು, ಮಾತಿನಲ್ಲಿ ಎಂತಹ ವ್ಯಕ್ತಿ (ನರೇಂದ್ರ ಮೋದಿ, ರಾಹುಲ್ ಗಾಂಧಿಯಿಂದ ಹಿಡಿದು ಶ್ರೀರಾಮುಲು, ಎನ್.ವೈ. ಹನುಮಂತಪ್ಪನವರೆಗೆ)ಯ ಬಗ್ಗೆಯೂ ಬಹುವಚನಗಳು ಭಾರೀ ಕಡಿಮೆ ಇರುತ್ತವೆ.
ತಾಳೆ ಹಾಕಿ ರಾಜಕೀಯ ಬೆಳವಣಿಗೆ ಚರ್ಚೆ: ಕೆಲವೊಂದು ರಾಜಕೀಯ ಬೆಳವಣಿಗೆಗಳನ್ನು ಇಟ್ಟುಕೊಂಡು, ಮತದಾನ ಹೆಚ್ಚಾಗಿರುವುದನ್ನು ನೋಡಿಕೊಂಡು, ಒಂದಕ್ಕೊಂದು ವಿಷಯಗಳನ್ನು ತಾಳೆ ಹಾಕಿಕೊಂಡು ಇವರು ಸೋಲುತ್ತಾರೆ, ಅವರು ಗೆಲ್ಲುತ್ತಾರೆಂದು ಮಾತನಾಡಿಕೊಳ್ಳುವವರ ಸಂಖೆಯೇ ಹೆಚ್ಚಾಗಿದೆ. ಮೋದಿ ಅಲೆ ವಿಷಯಗಳು ಬಹುಚರ್ಚಿತ. ರಾಜ್ಯದಲ್ಲಿ ಚುನಾವಣೆ ಮುಗಿದರೂ ಈ ಬಾರಿ ಲೋಕಸಭಾ ಚುನಾವಣೆ ದೇಶಾದ್ಯಂತ ವಿವಿಧ ಹಂತಗಳಲ್ಲಿ ನಡೆಯುತ್ತಿರುವುದರಿಂದ ಬೇರೆ, ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ, ಮಾಧ್ಯಮಗಳಲ್ಲಿ ಬರುವ ರಾಜಕೀಯ ಪಕ್ಷಗಳ ಮುಖಂಡರ ಮಾತಿನ ಕೆಸರೆರಚಾಟ ಸೇರಿದಂತೆ ಇತರ ವಿಷಯಗಳ ಕುರಿತಾಗಿ ಜನರಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವುದು ಸಾಮಾನ್ಯ.
ಬೇಸಿಗೆಯಲ್ಲಿ ಚುನಾವಣೆ ಬಿಸಿ ಚರ್ಚೆ: ಹೇಳಿ ಕೇಳಿ ಬಳ್ಳಾರಿಯಲ್ಲಿ ಬಿರು ಬೇಸಿಗೆ, ಮರದ ಕೆಳಗೆ ಅಥವಾ ತಂಪಾದ ಸ್ಥಳಗಳಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಹಳ್ಳಿಗಳಲ್ಲಿ ಹೊಲಗಳಲ್ಲಿ ಕೆಲಸಗಳು ಕಡಿಮೆಯಾಗಿರುವುದರಿಂದ, ನೀರಾವರಿ ಪ್ರದೇಶದಲ್ಲಿಯೂ ಬೆಳಗ್ಗೆ ಹೋಗಿ, ಹೊಲ, ಗದ್ದೆಗಳ ಕೆಲಸ ಮುಗಿಸಿಕೊಂಡು ಬಂದು, ಮನೆಯ ಮುಂದಿನ ಕಟ್ಟೆ, ಮರದ ನೆರಳಿಗೆ, ಹೋಟೆಲ್ಗಳಿಗೆ ಟೀ, ಕಾಫಿ ಹೀರುತ್ತಾ, ಸಿಗರೇಟ್, ಬಿಡಿ ಸೇದುತ್ತಾ ಚುನಾವಣೆಯ ಚರ್ಚೆಗಳನ್ನು ಮಾಡುವುದು ಗ್ರಾಮಾಂತರ ಪ್ರದೇಶಗಳಿಗೆ ಹೋದರೆ ತಿಳಿಯುತ್ತದೆ. ಒಂದು ತಿಂಗಳವರೆಗೆ ಚುನಾವಣೆ ರಿಸಲ್ಟ್ಗೆ ಹೇಗೆಪ್ಪ ಕಾಯುವುದು ಎಂದು ಕೇವಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ರಾಜಕಾರಣಿಗಳು ಮಾತ್ರ ಅನುತ್ತಿಲ್ಲ, ಜನಸಾಮಾನ್ಯರು ಇಂತಹ ಉದ್ಗಾರ ತೆಗೆಯುತ್ತಾರೆ.
ಒಟ್ಟಾರೆ ಕಳೆದ ಬಾರಿಗಿಂತ ಈ ಬಾರಿ ಮತದಾನ ಹೆಚ್ಚಾಗಿರುವುದು ಮಾತ್ರವಲ್ಲದೆ, ಚುನಾವಣೆ ಕುರಿತಾಗಿ ಕಳೆದ ಚುನಾವಣೆಗಿಂತ ಈ ಚುನಾವಣೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಸೋಲು-ಗೆಲವಿನ ಲೆಕ್ಚಾಚಾರ ಸೇರಿದಂತೆ ಚುನಾವಣೆ ವಿಷಯದ ಕುರಿತ ಚರ್ಚೆಗಳು ಹೆಚ್ಚು. ಲೋಕಸಭಾ ಚುನಾವಣೆ ಎಂದರೆ ಜನರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಹೆಚ್ಚಿನ ಜನ ಓಟು ಹಾಕಲ್ಲ ಎಂಬ ಮಾತು, ಈ ಚುನಾವಣೆ ಹುಸಿಗೊಳಿಸಿದೆ.