ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಚುನಾವಣೆಯಲ್ಲಿ ಕುಗ್ಗಿದ ಮದ್ಯದ ಆರ್ಭಟ

Vishwanath S
Updated On : 24 Apr 2014, 10:54 am

ಬಳ್ಳಾರಿ: ಚುನಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ ದೊಡ್ಡ ಬೇಟೆ 50 ದಿನಗಳ ಅವಧಿಯಲ್ಲಿಯೇ 411 ಕಡೆ ರೈಡ್, 96 ಜನರ ಬಂಧನ, ರು. 17.64 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭ ಮದ್ಯ ಕುಡಿತಕ್ಕೆ ತಡೆಯೊಡ್ಡಲು ಹೋದಾಗ ಲಿಕ್ಕರ್ಸ್ ಮ್ಯಾನಿಟರಿಂಗ್ ತಂಡವು ವಶಪಡಿಸಿಕೊಂಡಿರುವ ಪ್ರಮಾಣ ಇದು. ಕಳೆದ ಬಾರಿ ಚುನಾವಣೆಗೆ ಹೋಲಿಸಿಕೊಂಡರೆ, ಈ ಬಾರಿ ಮದ್ಯದ ಆರ್ಭಟ ಮಾತ್ರ ಕಡಿಮೆ ಎನ್ನಬಹುದು.
ಚುನಾವಣೆ ಅಂದರೆ ಕುಡಿತದ ಚಟವುಳ್ಳ ಮತದಾರರಿಗೆ ಸುಗ್ಗಿಯೇ ಸುಗ್ಗಿ. ಊರುಗಳಿಗೆ, ಬಡಾವಣೆಗಳಿಗೆ ಬರುವ ಪ್ರತಿಯೊಬ್ಬ ರಾಜಕಾರಣಿಗಳಿಂದಲೂ ಮದ್ಯ ಪಾನಿಯ ಮತದಾರರಿಗೆ ಬಹುತೇಕ ಸಂದರ್ಭ ದಕ್ಷಿಣೆ ಇದ್ದೆ ಇರುತ್ತದೆ. ಮತದಾರರ ಮನವೊಲಿಸಿಕೊಳ್ಳುವ ದೃಷ್ಟಿಯಿಂದ ಕೆಲವೊಂದು ರಾಜಕೀಯ ಪಕ್ಷಗಳು ಹಾಗೂ ಮುಖಂಡರ ಮದ್ಯದ ಸ್ಟಾಕ್ ಇಟ್ಟುಕೊಂಡು ಅಂಚುವುದು ಹೆಚ್ಚು. ಈ ಬಾರಿ ಆಯೋಗ ಹದ್ದಿನಕಣ್ಣು ಮದ್ಯದ ಆಮಿಷಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿತ್ತು. ಆದರೆ, ಕೆಲವು ಕಡೆಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಮಾತ್ರ ಹಾಗೇಯೆ ಸಾಗಿತ್ತು. ಈ ಬಾರಿ ಚುನಾವಣೆಯಲ್ಲಿ ದಾಳಿ ಮಾಡಿ ಮದ್ಯ ವಶಪಡಿಸಿಕೊಳ್ಳುವ ಅಧಿಕಾರಿಗಳ ತಂಡಕ್ಕೆ ಸುಗ್ಗಿ ಎನ್ನುವಂತಿತ್ತು.
ಮದ್ಯ ಅಕ್ರಮದತ್ತ ಆಯೋಗದ ಕಣ್ಣು
ಈ ಬಾರಿ ಚುನಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಲಿಕ್ಕರ್ ಮ್ಯಾನಿಟರಿಂಗ್ ತಂಡವನ್ನು ಪ್ರತ್ಯೇಕ ಮಾಡಿ, ಅದರಲ್ಲಿ 15 ತಂಡಗಳನ್ನು ರಚನೆ ಮಾಡುವ ಮೂಲಕ ಮದ್ಯ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯುವ ಪ್ರಯತ್ನ ಮಾಡಲಾಗಿತ್ತು. ಈ ತಂಡ ಚುನಾವಣಾಧಿಕಾರಿಗಳು ವ್ಯವಸ್ಥೆ ಮಾಡಿರುವ ಸಂಯುಕ್ತ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಾ, ದಾಳಿ ನಡೆಸಿದೆ. ಇನ್ನು ಪಾನೀಯ ನಿಗಮದಿಂದ ಎತ್ತುವಳಿಯಾಗುವ ಮದ್ಯದ ಮೇಲೆ ನಿಗಾ ವಹಿಸಿದ್ದ ತಂಡ, ಪಾನೀಯ ನಿಗಮದಿಂದ ಯಾವ ಪ್ರಮಾಣದಲ್ಲಿ ಮದ್ಯ ಎತ್ತುವಳಿಯಾಗುತ್ತದೆ ಎಂಬದನ್ನು ನೋಡಿ, ಅದರ ಆಧಾರದ ಮೇಲೆ ದಾಳಿ ನಡೆಸುತ್ತಿತ್ತು.
96 ಜನರ ಸೆರೆ, ರು. 17.64 ಲಕ್ಷ ವಶ
ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ಮದ್ಯ ಸಾಗಾಟ ಹಾಗೂ ಆಂಧ್ರಪ್ರದೇಶದಿಂದ ಬಳ್ಳಾರಿ ಜಿಲ್ಲೆಗೆ ಬರುವ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟದ 411 ಅಡ್ಡೆ ಮೇಲೆ ಲಿಕ್ಕರ್ಸ್ ಮ್ಯಾನಿಟರಿಂಗ್ ತಂಡದ ಅಧಿಕಾರಿ ಮಹಮ್ಮದ್ ಅಬೀಬ್ ಹುಸೇನ್ ನೇತೃತ್ವದಲ್ಲಿ ದಾಳಿ ಮಾಡಿ, 112 ಪ್ರಕರಣಗಳನ್ನು ದಾಖಲಿಸಿಕೊಂಡು, 96 ಜನರನ್ನು ಬಂಧಿಸಿದ್ದಾರೆ. ಸುಮಾರು 822 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. 189 ಕೆಜಿ ಸೆಂಧಿ, 2 ಲೀಟರ್ ಸರಾಯಿ, 60 ಲೀಟರ್ ಕೊಳತ ಬೆಲ್ಲದ ಕೊಳ, 16 ಬೈಕ್, 1 ಬೊಲೆರೊ, 2 ಬಜಾಜ್ ಆಟೋ, 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ರು. 17,64,577 ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ.
ಬಳ್ಳಾರಿ ತಾಲೂಕಲ್ಲಿ ಹೆಚ್ಚು ಬಂಧನ
ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಬಳ್ಳಾರಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಅಂದರೆ 121 ಕಡೆ ದಾಳಿ ನಡೆದು, 33 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 33 ಜನರನ್ನು ಬಂಧಿಸಲಾಗಿದೆ. ರು. 12.08 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ದಾಳಿಯೆಂದರೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 13 ಕಡೆ ದಾಳಿ, 8 ಕೇಸು, 7 ಜನರ ಸೆರೆ. ಸಿರುಗುಪ್ಪ ತಾಲೂಕಲ್ಲಿ 33 ಕಡೆ ದಾಳಿ, 12 ಪ್ರಕರಣ ದಾಖಲು, 10 ಜನರ ಸೆರೆ. ಸಂಡೂರು ತಾಲೂಕಿನಲ್ಲಿ 124 ಕಡೆ ದಾಳಿ, 15 ಪ್ರಕರಣ ದಾಖಲು, 10 ಜನರ ಸೆರೆ. ಹೊಸಪೇಟೆಯಲ್ಲಿ 64 ಕಡೆ ದಾಳಿ, 24 ಪ್ರಕರಣ ದಾಖಲು, 20 ಜನರ ಸೆರೆ, ರು. 1.61 ಲಕ್ಷ ವಶ. ಕೂಡ್ಲಿಗಿಯಲ್ಲಿ 32 ಕಡೆದಾಳಿ, 13 ಪ್ರಕರಣ ದಾಖಲು, 12 ಜನರ ಸೆರೆ. ಹಡಗಲಿಯಲ್ಲಿ 24 ಕಡೆ ದಾಳಿ, 7 ಪ್ರಕರಣ ದಾಖಲು, ನಾಲ್ವರು ಬಂಧನಕ್ಕೊಳಗಾಗಿದ್ದಾರೆ.
ಡಿಸಿ, ಎಸ್ಪಿ ಮಾರ್ಗದರ್ಶನದಲ್ಲಿ ಲಿಕ್ಕರ್ ಮ್ಯಾನಿಟರಿಂಗ್ ಟೀಂ ಮಾಡಿದ್ದರು. 15 ತಂಡ ರಚಿಸಿ ಜಿಲ್ಲಾದ್ಯಂತ ದಾಳಿ ಮಾಡಲಾಗಿದ್ದು, ಪರಿಣಾಮಕಾರಿ ರೀತಿಯಲ್ಲಿ ಮದ್ಯ ಮಾರಾಟ ತಡೆಯಲು ಪ್ರಯತ್ನಿಸಿದ್ದೇವೆ. ಮತದಾರರಿಗೆ ಮದ್ಯ ಆಮಿಷವೊಡ್ಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಮಾಹಿತಿ ಬಂದ ಕ್ಷಣ ದಾಳಿ ಮಾಡಿ, ಕ್ರಮ ಕೈಗೊಂಡಿದ್ದೇವೆ.
- ಮಹಮ್ಮದ್ ಅಬೀಬ್ ಹುಸೇನ್,
ಲಿಕ್ಕರ್ ಮ್ಯಾನಿಟರಿಂಗ್ ತಂಡದ ಅಧಿಕಾರಿ, ಅಬಕಾರಿ ಇಲಾಖೆ ಉಪ ಆಯುಕ್ತ


-ಶಶಿಧರ ಮೇಟಿ ಚೇಳ್ಳಗುರ್ಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement