ನೀರಿಗಾಗಿ ನಾಗರಿಕರ ಪರದಾಟ
ಹಗರಿಬೊಮ್ಮನಹಳ್ಳಿ: ತಾಲೂಕಿನ ಜನರ ಮೇಲೆ ಈ ಬಾರಿಯೂ ಗಂಗೆ ಮುನಿಸು ಈ ಬಾರಿ ಹೆಚ್ಚಾಗಿದೆ. 3 ವರ್ಷಗಳಿಂದ ಕೈಕೊಟ್ಟ ಮಳೆರಾಯನಿಂದ ಬಿಸಿಲೂರಿನಲ್ಲಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹಗರಿಬೊಮ್ಮನಹಳ್ಳಿ ಪಟ್ಟಣ ಬಿಟ್ಟರೆ ಇಡೀ ತಾಲೂಕಿಗೆ ಕೊಳವೆಬಾವಿ ನೀರೇ ಗತಿ. ಅಂತರ್ಜಲ ಕುಸಿತದಿದ್ದರಿಂದ ಅವುಗಳಲ್ಲೂ ನೀರು ಸಿಗುತ್ತಿಲ್ಲ. ಅದರಿಂದಾಗಿ ತಾಲೂಕಿನ ಶೇ. 70 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ.
ಉಪಾಹಾರ ಸೇವಿಸಿದರೆ ಮಾತ್ರ ಕುಡಿಯುವ ನೀರು. ಚಹಾ ಕುಡಿದರೆ ನೀರು ಕೊಡುವುದಿಲ್ಲ ಎಂದು ಮುಲಾಜಿಲ್ಲದೆ ಪಟ್ಟಣದ ಹೋಟೆಲ್ಗಳಲ್ಲಿ ಹೇಳಿ ಕಳಿಸುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ತಗ್ಗಿಸುವುದು ತಾಲೂಕಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಭಿಯಂತರು, ತಾಪಂ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸವಾಲಿನ ಕೆಲಸಗಳಾಗಿ ಪರಿಣಮಿಸಿದೆ. ದಿನಕ್ಕೆ ಎರಡ್ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವರೂಪ ಪಡೆಯುತ್ತಿರುವುದು ಅಧಿಕಾರಿಗಳಿಗೆ ತಲೆನೋವು ತರಿಸಿದೆ. ಆ ಗ್ರಾಮಗಳ ಸಮಸ್ಯೆಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೊಂದೆರಡು ಗ್ರಾಮಗಳ ಜನತೆ ಸಮಸ್ಯೆಯ ದೂರು ಹಿಡಿದು ನಿಂತಿರುತ್ತಾರೆಂದು ತಾಪಂ ಕಚೇರಿಯ ಸಹಾಯವಾಣಿಯಲ್ಲಿ ದೂರುಗಳು ದಾಖಲಾಗಿವೆ. ಈಗಾಗಲೇ ತಾಲೂಕಿನಲ್ಲಿ ಹತ್ತಾರು ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ಉದ್ಭವಿಸಿದೆ. ತಾಲೂಕಿನಲ್ಲಿ ಇನ್ನೊಂದು ವಾರದಲ್ಲಿ ಮಳೆ ಸುರಿಯದಿದ್ದರೆ ಕೊಡಪಾನ ನೀರಿಗಾಗಿ ನಾಗರಿಕರು ಕಿಲೋಮೀಟರ್ಗಟ್ಟಲೇ ಅಲೆಯುವ ಸ್ಥಿತಿ ಬರುತ್ತದೆ.
ಕೊಳವೆಬಾವಿ ಕೊರೆಸ್ತಿದ್ದೇವೆ...: ಮಂಗಳವಾರ ಸಂಜೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ತಾಲೂಕಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ಡಿ. ಬಸವನಗೌಡ, ಫೆಬ್ರವರಿ ತಿಂಗಳಿನಿಂದ ಇಲ್ಲಿವರೆಗೆ ಸಮಸ್ಯೆ ಬಂದ ಕಡೆ ಕೊಳವೆಬಾವಿ ಕೊರೆಯಿಸಿ ಅನುಕೂಲ ಮಾಡಿಕೊಡುತ್ತಿದ್ದೇವೆ. ಕೊರೆದ ಕೊಳವೆಬಾವಿಗಳಲ್ಲಿ ಒಂದು ಇಲ್ಲವೇ ಒಂದೂವರೆ ತಿಂಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ಬತ್ತುತ್ತಿವೆ. ಭೂಮಿಯಾಳದಲ್ಲಿ ನೀರಿದ್ದರೆ ಪರಿಸ್ಥಿತಿ ಸರಿದೂಗಿಸಬಹುದು. ಅಲ್ಲೇ ನೀರಿಲ್ಲ ಎಂದ ಮೇಲೆ ಹೇಗೆ? ಇನ್ನು ಹಲವು ಕಡೆಗಳಲ್ಲಿ ಕೃಷಿ ಪಂಪ್ಸೆಟ್ಗಳಿಂದ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಸಮಸ್ಯೆ ಬಂದಾಕ್ಷಣ ತುರ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಂಜಿನಿಯರ್ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ. ಪರಿಸ್ಥಿತಿ ತೀವ್ರ ಸ್ವರೂಪ ತಾಳಿದರೆ ಅಂಥ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದೇಶಿಸಿದೆ ಎಂದರು.
ಕೆಡಿಪಿ ಸಭೆಯಲ್ಲೂ ನೀರಿನದ್ದೇ ಚರ್ಚೆ: ಈ ಮಧ್ಯೆ ಮಂಗಳವಾರ ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಯಾರೂ ಅಲಕ್ಷ್ಯ ಮಾಡಕೂಡದು. ಬೇಸಿಗೆ ಕಾಲ ಮುಗಿಯುವವರೆಗೂ ಹಗಲು-ರಾತ್ರಿ ನಿಗಾ ವಹಿಸಬೇಕು. ಕೇಂದ್ರಸ್ಥಾನದಲ್ಲಿದ್ದು ಪರಿಸ್ಥಿತಿ ಅವಲೋಕಿಸುತ್ತಿರಬೇಕು. ಈ ವಿಚಾರದಲ್ಲಿ ಉದಾಸೀನ ಮಾಡಿದರೆ ಅಂಥ ಪಿಡಿಒಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಾಪಂ ಇಓ ಬಿಎಂಎಸ್ ವೀರಯ್ಯ ತಾಲೂಕಿನ ಎಲ್ಲ ಪಿಡಿಒಗಳಿಗೆ ಎಚ್ಚರಿಕೆ ನೀಡಿದ್ದಾರೆ.