ಪರೀಕ್ಷಾ ಶುಲ್ಕ ಹೆಚ್ಚಳ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 23
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಹಾಗೂ ಒಬಿಸಿ ವಿದ್ಯಾರ್ಥಿಗಳ ಶುಲ್ಕ ವಿನಾಯ್ತಿ ಹಣ ಕಟ್ಟಲು ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಿವಿಗೆ ಬುಧವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ವಿವಿಯ ಕುಲಪತಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು, ಹೊಸ ಪರೀಕ್ಷಾ ಪದ್ಧತಿಯನ್ನು ಹಿಂಪಡೆದು, ಈ ಹಿಂದಿನ ಪದ್ಧತಿಯನ್ನೇ ಯಥಾ ರೀತಿ ಮುಂದುವರಿಕೆ ಸೇರಿದಂತೆ ವಿದ್ಯಾರ್ಥಿಗಳ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ವಿ. ಅಮರೇಶ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗೊಳಪಟ್ಟ ಬಳ್ಳಾರಿ ವಿಎಸ್ಕೆ ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿಢೀರನೆ ಶುಲ್ಕ ಹೆಚ್ಚಳ ವಿಷಯ ಆಘಾತವುಂಟು ಮಾಡಿದೆ. ರಾಜ್ಯದ ಇತರೆ ಯಾವುದೇ ವಿವಿಗಳು ಏರಿಕೆ ಮಾಡದ ಪರೀಕ್ಷಾ ಶುಲ್ಕವನ್ನು ಬಳ್ಳಾರಿ ವಿಎಸ್ಕೆ ವಿವಿ ಮಾತ್ರ ಏರಿಕೆ ಮಾಡಿದೆ. ಹೈ-ಕ ಭಾಗದ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ತಂದ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಪೂರಕ ವಾತಾವರಣ ನಿರ್ಮಿಸುವ ಬದಲಿಗೆ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ, ಉನ್ನತ ಶಿಕ್ಷಣವನ್ನು ಮಾರಾಟಕ್ಕಿಟ್ಟಂತಾಗಿದೆ ಎಂದು ವ್ಯಂಗ್ಯವಾಡಿದರು.
ಈ ಮೊದಲು ರು. 110 ಇದ್ದ ಪರೀಕ್ಷಾ ಶುಲ್ಕ ಇದೀಗ ದಿಢೀರನೆ ರು. 700-850ಕ್ಕೆ ಹೆಚ್ಚಿಸಿ, ಹೊರಡಿಸಿರುವ ಆದೇಶದ ವಿರುದ್ಧ ಈಗಾಗಲೇ ಹೋರಾಟ ಮಾಡಲಾಗಿದ್ದು, ಮರು ಪರಿಷ್ಕರಣೆ ನೆಪದಲ್ಲಿ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಕಡಿಮೆ ಮಾಡಿ, ಓಬಿಸಿ ವಿದ್ಯಾರ್ಥಿಗಳಿಗೆ ಹಾಗೆ ಮುಂದುವರಿಸಲಾಗಿದೆ. ಇದು ವಿದ್ಯಾರ್ಥಿಗಳನ್ನು ವಂಚಿಸುವ ಹುನ್ನಾರವಾಗಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯ ಹುಳ್ಳಿ ಉಮೇಶ್ ಮಾತನಾಡಿ, ಬಳ್ಳಾರಿಯಲ್ಲಿ ವಿಎಸ್ಕೆ ವಿವಿ ಆರಂಭದ ದಿನಗಳಲ್ಲೂ ಎಸ್ಎಫ್ಐ ಸಂಘಟನೆ ಹೋರಾಟ ಮಾಡಿದೆ. ಇಲ್ಲಿನ ಹಲವಾರು ಸಮಸ್ಯೆಗಳ ಕುರಿತು ಧ್ವನಿಯೆತ್ತಿ ಉಳಿಸಿಕೊಂಡಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಎದುರಾದರೂ, ಹಿಂದೆ ಸರಿಯದೆ ಹೋರಾಟಕ್ಕಿಳಿಯಬೇಕು. ಸದ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರ ಆದೇಶ ಹಿಂಪಡೆಯುವವರೆಗೂ ಹೋರಾಟ ಮಾಡಬೇಕು ಎಂದರು.
ಪರೀಕ್ಷಾ ಶುಲ್ಕ ಪದ್ಧತಿಯನ್ನು ಈ ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು. ಓಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು. ಈಗಾಗಲೇ ಶುಲ್ಕ ಭರಿಸಿರುವ ವಿದ್ಯಾರ್ಥಿಗಳಿಗೆ ಬಾಕಿ ಹಣ ಮರುಪಾವತಿ ಮಾಡಬೇಕು. ದಂಡವಿಲ್ಲದೆ, ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಿಸಬೇಕು. ವಿವಿಯಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಮುಖಂಡರನ್ನೊಳಗೊಂಡ ಸಭೆಯನ್ನು ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ್ ಪೂಜಾರ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್, ದುರ್ಗೇಶ್ ಡಗ್ಗಿ, ದೊಡ್ಡ ಬಸವರಾಜ್, ಗ್ಯಾನೇಶ್ ಕಡಗದ್, ಪಂಪಾನಂದ, ರಾಜೇಶ್, ಶರತ್ ಕುಮಾರ್, ಬಾಳಪ್ಪ ಹುಲಿಹೈದರ್, ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಇದ್ದರು.