ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಾಲು ಉತ್ಪಾದಕರ ಸಂಘಕ್ಕೆ ದೇಣಿಗೆ

Vishwanath S
Updated On : 24 Apr 2014, 10:55 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 23
ತಾಲೂಕಿನ ಮಾನ್ಯರ ಮಸಲವಾಡ ಗಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ರು. 1 ಲಕ್ಷ ದೇಣಿಗೆ ನೀಡಲಾಯಿತು.
ಮಾನ್ಯರ ಮಸಲವಾಡ ಗಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ರು. 50 ಸಾವಿರ ಹಾಗೂ ಗಣಕೀಕರಣಕ್ಕೆ ರು. 50 ಸಾವಿರ ಸೇರಿದಂತೆ ಒಟ್ಟು ರು. 1 ಲಕ್ಷದ ಚೆಕ್‌ನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ನಟರಾಜ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವನಾಗಪ್ಪ, ಕಾರ್ಯದರ್ಶಿ ಚನ್ನವೀರಪ್ಪನವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕೆಎಂಎಫ್ ಸಹಾಯಕ ವ್ಯವಸ್ಥಾಪಕ ಶಿವಬಸವ ಕಣವಿ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಹಿಳೆಯರ ವಸ್ತ್ರವಿನ್ಯಾಸತರಬೇತಿ: ಅರ್ಜಿ ಆಹ್ವಾನ
ಬಳ್ಳಾರಿ: ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವತಿಯರಿಗೆ 21 ದಿನಗಳು ಉಚಿತವಾಗಿ ಮಹಿಳೆಯರ ವಸ್ತ್ರವಿನ್ಯಾಸ(ಟೈಲರಿಂಗ್) ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿ ಮೇ  ತಿಂಗಳ ಎರಡನೇ ವಾರದಿಂದ ನಡೆಯಲಿದ್ದು, ಈ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಅಭ್ಯರ್ಥಿಗಳು 18ರಿಂದ 45 ವರ್ಷ ವಯೋವುತಿಯೊಳಗಿರಬೇಕು. ಹೊಲಿಗೆ ಕ್ಷೇತ್ರದಲ್ಲಿ ಪ್ರಾಥಮಿಕ ಜ್ಞಾನ ಅಥವಾ ಅನುಭವ ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರಬೇಕು. ಈ ಸಂಸ್ಥೆಯಿಂದ ಈಗಾಗಲೇ ತರಬೇತಿ ಪಡೆದವರು ಅರ್ಹರಲ್ಲ. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ತರಬೇತಿ ಹೆಸರು, ಸಂಬಂಧಿತ ವಿಷಯದಲ್ಲಿ ಹೊಂದಿರುವ ಪ್ರಾಥಮಿಕ ಜ್ಞಾನ, ಅನುಭವ ಮತ್ತಿತರ ವಿವರಗಳನ್ನು ಏ. 30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಡಿಐಸಿ ಕಾಂಪೌಂಡ್, ಹೊಸಪೇಟೆ ರಸ್ತೆ, ಬಳ್ಳಾರಿ ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-244117 ಸಂಪರ್ಕಿಸಿ.
ಯೋಗದಿಂದ ನೆನಪಿನ ಶಕ್ತಿ ವೃದ್ಧಿ: ಪುರಾಣಿಕ್
ಬಳ್ಳಾರಿ: ಯೋಗದಿಂದ ಮಕ್ಕಳಿಗೆ ಆರೋಗ್ಯ ಜತೆಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಬಳ್ಳಾರಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಗೌರವಾಧ್ಯಕ್ಷ ಎಸ್.ಸಿ. ಪುರಾಣಿಕ್ ತಿಳಿಸಿದರು.
ತಾಲೂಕಿನ ಕಪ್ಪಗಲ್ಲು ಗ್ರಾಮದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಒಂದು ತಿಂಗಳ ವಿಶೇಷ ಬೇಸಿಗೆ ಯೋಗ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪ್ರತಿದಿನದ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರು ನಿತ್ಯವೂ ಯೋಗ, ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಜತೆಗೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.
ಶಾರದಾ ಹಿರಿಯ ಪ್ರಾಥಮಿಕ ಶಾಲೆ ಕಾರ್ಯದರ್ಶಿ ಕೆ. ಪರಮೇಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣೇಕಲ್ ಎರ್ರಿಸ್ವಾಮಿ, ಬಿ.ಯು. ದೊಡ್ಡಬಸಯ್ಯ, ಪಿ. ರಂಜಾನ್ ಸಾಬ್, ಇಸ್ವಿ ಪಂಪಾಪತಿ, ಎ.ಎಂ. ಮಲ್ಲಿಕಾರ್ಜುನಸ್ವಾಮಿ, ಬಿ. ಕೃಷ್ಣಯ್ಯ, ಈಡಿಗರ ಕೃಷ್ಣಪ್ಪ, ಹೊನ್ನೂರ್ ಸಾಬ್, ಎ.ಎಂ. ಮಂಜುನಾಥಸ್ವಾಮಿ ಇತರರಿದ್ದರು. ಬಸವರಾಜ್ ನಿರೂಪಿಸಿದರು.
ವೀರಶೈವ ಪಂಚಮಸಾಲಿ ಭವನ ಉದ್ಘಾಟನೆ ಮೇ 12ಕ್ಕೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೀರಶೈವ ಪಂಚಮಸಾಲಿ ಭವನದ ಉದ್ಘಾಟನೆ ಹಾಗೂ ಸಮೂಹಿಕ ವಿವಾಹ ಕಾರ್ಯಕ್ರಮ ಮೇ 12ರಂದು ಜರುಗಲಿದೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು ತಿಳಿಸಿದ್ದಾರೆ. ಪಟ್ಟಣದ ಹರ ದೇವಸ್ಥಾನದಲ್ಲಿ ಜರುಗಿದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು. ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾಧ್ಯಕ್ಷ ಬೊಪ್ಪಖಾನ್ ಕುಮಾರಸ್ವಾಮಿ, ತಾಲೂಕಾಧ್ಯಕ್ಷ ಅಕ್ಕಿಶಿವಣ್ಣ, ಹನಸಿ ಸಿದ್ದೇಶ್, ಇಟಿಗಿ ಕಲ್ಲೇಶಪ್ಪ, ಜೆ.ಬಿ. ಶರಣಪ್ಪ, ಎಚ್.ಪಿ. ಶಿವಶಂಕರಗೌಡ, ಕೊಟ್ರೇಶ್ ಶೆಟ್ಟರ್, ನಿರ್ಮಲಾ ಮೆಣಸಿಗಿ, ಮಂಗಳಾ ಬಸವರಾಜ, ಬ್ಯಾಡಗಿ ರಾಜೇಶ್, ಭದ್ರವಾಡಿ ವಿನಾಯಕ ಇತರರಿದ್ದರು.
ಬಿ. ಮುತ್ಕೂರು ಕುಡಿವ ನೀರು ಸಮಸ್ಯೆಗೆ ಮುಕ್ತಿ
ಹಗರಿಬೊಮ್ಮನಹಳ್ಳಿ: ಕುಡಿವ ನೀರಿಗೆ ತೀವ್ರ ಹಾಹಾಕಾರವಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಬಿ. ಮುತ್ಕೂರು ಗ್ರಾಮದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಯಿಸಿ ಗ್ರಾಮದಲ್ಲಿ ಉದ್ಭವಿದ್ದ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ತಾಪಂ ಇಒ ಬಿಎಂಎಸ್ ವೀರಯ್ಯ ಹಾಗೂ ಪಂರಾಇ ಎಇಇ ಆರ್. ಪ್ರಭು ಬುಧವಾರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ಕುರಿತು ಬಿ. ಮುತ್ಕೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎಂಬ ಶೀರ್ಷಿಕೆಯಡಿ ಏ. 22ರ ಸಂಚಿಕೆಯಲ್ಲಿ ಕನ್ನಡಪ್ರಭ ಲೇಖನ ಪ್ರಕಟಿಸಿತ್ತು.
ಗ್ರಾಮದಲ್ಲಿ ಮೂರು ಕೊಳವೆ ಬಾವಿಗಳನ್ನು ತೋಡಿಸಲಾಗಿದ್ದು, ಈ ಪೈಕಿ ಎರಡರಲ್ಲಿ ತಲಾ 1.5 ಇಂಚಿನಷ್ಟು ನೀರು ಬಿದ್ದಿದೆ. ಒಂದು ಕೊಳವೆ ಬಾವಿ ವಿಫಲವಾಗಿದೆ. ಬುಧವಾರ ಬೆಳಗ್ಗೆಯಿಂದ ಕೊಳವೆ ಬಾವಿಯಲ್ಲಿ ಮೋಟಾರ್ ಇಳಿಸುವ ಕೆಲಸ ಆರಂಭಿಸಿದೆ. ಮೋಟಾರ್ ಅಳವಡಿಸಿದ ಮೇಲೆ ನಿರಂತರವಾಗಿ ನೀರಿನ ಲಭ್ಯತೆ ಬಗ್ಗೆ ಪರೀಕ್ಷೆ ಮಾಡಿದ ಮೇಲಷ್ಟೆ ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುವುದು ಎಂದರು.
ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಾಕ್ಷಣ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಸಡ್ಡೆ ತೋರಿಸದಂತೆ ಈಗಾಗಲೆ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ತಾಪಂ ಇಒ ಬಿಎಂಎಸ್ ವೀರಯ್ಯ ಹಾಗೂ ಪಂರಾಇ ಎಇಇ ಆರ್. ಪ್ರಭು ತಿಳಿಸಿದರು.
ಮುಂಜಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ
ಹೊಸಪೇಟೆ: ಮುಸ್ಲಿಂ ಸಮಾಜದ ಬಡ ಮಕ್ಕಳಿಗೆ ಉಚಿತ ಮುಂಜಿ (ಖತ್ನಾ) ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಸ್ಲಿಂ ಸಮಾಜದ ಮುಖಂದ ಎಚ್. ಇಮಾಮ್ ಸಾಹೇಬ್ ಹೇಳಿದರು. ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅಂಜುಮನ್ ನೌ ಜವಾನ್ ಕಮಿಟಿ ಏರ್ಪಡಿಸಿದ್ದ 15ನೇ ವರ್ಷದ ಉಚಿತ ಮುಂಜಿ (ಖತ್ನಾ) ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಕ ಪಿ. ಖಾಸಿಂ ಸಾಹೇಬ್ ಮಾತನಾಡಿ, ಮುಸ್ಲಿಂ ಸಮಾಜದವರು ಮಕ್ಕಳ ಮುಂಜಿಗೆ ದುಂದು ವೆಚ್ಚ ಮಾಡುವ ಬದಲು ಸಾಮೂಹಿಕ ಮುಂಜಿ ಕಾರ್ಯಕ್ರಮ ನೆರವೇರಿಸಿ, ಹಣವನ್ನು ಶಿಕ್ಷಣಕ್ಕೆ ಮೀಸಲಿಡುವುದು ಉತ್ತಮ. ಸಾಮೂಹಿಕ ವಿವಾಹಗಳ ಮೂಲಕ, ಮದುವೆಗಳ ಅದ್ಧೂರಿತನ ನಿಲ್ಲಿಸಿ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕೆಂದರು. ಎನ್.ಎಸ್. ಬುಡೇನ್ ಸಾಬ್, ಅಡ್ಡಿಗೇರಿ ಕಾಶಿಂಸಾಬ್, ಎಂ. ಶ್ಯಾಮು ಸಾಹೇಬ್, ಅಲ್ಲಾಭಕ್ಷಿ, ಎಂ. ಇಮಾಂವಲಿ ಸಾಬ್, ಖಲಾಂದರ್, ಎಚ್. ಬುಡೇನ್, ಮಹಮ್ಮದ್ ಅಲಿ, ರಫೀಕ್, ಖಾದರ್ ಬಾಷಾ, ಮೆಕ್ಯಾನಿಕ್ ಇಸಾಕ್ ಇದ್ದರು. 86 ಮಕ್ಕಳಿಗೆ ಸಾಮೂಹಿಕ ಮುಂಜಿ ನಡೆಸಲಾಯಿತು.
ಕಬೀರ್ ಕುಟುಂಬಕ್ಕೆ ನ್ಯಾಯ ನೀಡಿ: ಗುಡಿಮನಿ
ಹೊಸಪೇಟೆ: ಮಂಗಳೂರು ತಾಲೂಕಿನ ಜೋಗದಕಟ್ಟೆ ಗ್ರಾಮದ ನಿವಾಸಿ ಕಬೀರ್ ಎನ್ನುವ ಯುವಕನನ್ನು ಶೃಂಗೇರಿ ಹತ್ತಿರ ತನಿಕೋಡು ರಸ್ತೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಇದಕ್ಕೆ ಕಾರಣರಾದವರನ್ನು ತಕ್ಷಣವೇ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಒತ್ತಾಯಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಸ್ಸೆಸ್ ನಿಲುವನ್ನು ಹೊಂದಿರುವ ಕೆಲವರು ಪೊಲೀಸ್ ಇಲಾಖೆಯಲ್ಲಿ ಆರೆಸ್ಸೆಸ್ ತರಬೇತಿಯನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ ಎಂಬ ಗುಮಾನಿ ಇದೆ. ಯುವಕ ಕಬೀರ್ ಮರಣದೊಂದಿಗೆ ಸರ್ಕಾರ ಈಗಲಾದರೂ ಎಚ್ಚೆತುಕೊಂಡಿದ್ದರೇ ರಾಜ್ಯದ ಜನತೆ ನೆಮ್ಮದಿಯಿಂದ ಇರಬಹುದು. ಆದರೆ, ಆರೆಸ್ಸೆಸ್ ನಿಲುವನ್ನು ಹೊಂದಿದಂತಹ ಕೆಲವು ಪೊಲೀಸರನ್ನು ಇಲಾಖೆಯಿಂದ ಬೇರ್ಪಡಿಸಬೇಕು. ಕಬೀರ್ ಮರಣದ ತನಿಖೆಗೆ ಸೀಮಿತಗೊಳ್ಳದೆ ಅನೈತಿಕ ಪೊಲೀಸ್ ಗೂಂಡಾಗಿರಿ ವರ್ತನೆ ಬಗ್ಗೆನೂ ತನಿಖೆ ಕೈಗೊಳ್ಳಬೇಕು. ಕಬೀರ್ ಕುಟುಂಬಕ್ಕೆ ಕೇವಲ ರು. 5 ಲಕ್ಷ ಪರಿಹಾರ ನೀಡಿದ್ದು, ಜಮೀನು, ಸರ್ಕಾರಿ ಉದ್ಯೋಗ ಸೇರಿದಂತೆ ರು. 10 ಲಕ್ಷ ಪರಿಹಾರ ನೀಡಬೇಕು ಎಂದ ಅವರು, ಏ. 24ರಂದು ಶೃಂಗೇರಿಯಲ್ಲಿ ನಡೆಯುವ ಪ್ರತಿಭಟನೆ ಸಭೆಯಲ್ಲಿ ಜಿಲ್ಲೆಯಿಂದ ನಮ್ಮ ಸಂಘಟನೆಯ ಸದಸ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement