ದಲಿತರ ಮೇಲೆ ಹಲ್ಲೆ: ಖಂಡನೆ
ಕಂಪ್ಲಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗಣಿ ಗ್ರಾಮದ ದೇವಸ್ಥಾನವೊಂದನ್ನು ಪ್ರವೇಶಿಸಿದ ದಲಿತನ ಮೇಲೆ ಸವರ್ಣೀಯರು ನಡೆಸಿದ ಹಲ್ಲೆ ಕುರಿತು ಬಾಗಲಕೋಟೆ ಜಿಲ್ಲಾಡಳಿತ ಮೌನವಾಗಿರುವುದು ಅಲ್ಲಿನ ದಲಿತರ ಬಾಳಿಗೆ ಬೆಂಕಿಯಿಟ್ಟಂತಾಗಿದೆ ಎಂದು ಕಂಪ್ಲಿ 4ನೇ ವಾರ್ಡ್ನ ಡಾ. ಬಿ.ಆರ್. ಅಂಬೇಡ್ಕರ್ ನಗರದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ. ಹುಲುಗಪ್ಪ, ಉಪಾಧ್ಯಕ್ಷ ಎಚ್. ರಾಘು, ಪ್ರಧಾನ ಕಾರ್ಯದರ್ಶಿ ಟಿ. ಹೊನ್ನೂರಪ್ಪ, ಖಜಾಂಚಿ ಜಿ. ಯಲ್ಲಪ್ಪ, ಗೌರವಾಧ್ಯಕ್ಷ ಜಿ. ರಾಮಣ್ಣ, ಕಾನೂನು ಸಲಹೆಗಾರ ಕೆ.ಎಚ್. ಹುಲುಗಪ್ಪ ಇತರ ಪದಾಧಿಕಾರಿಗಳು ತೀವ್ರ ಖಂಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 60-70 ವರ್ಷ ಕಳೆದರೂ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದೇಶದ ಸಂವಿಧಾನ ಬರೆದವರು ದಲಿತರೆ ಎನ್ನುವುದನ್ನು ಯಾರು ಮರೆಯಬಾರದು. ಸಂವಿಧಾನ ರಚಿಸಿ ಸರ್ವರಿಗೆ ಸಮಬಾಳು ಎಂದು ಹೇಳಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಈ ದುರ್ಘಟನೆಯಿಂದ ಅವಮಾನವಾಗಿದೆ. ದಲಿತಪರ ಸಂಘಟನೆಗಳು ಮೌನ ವಹಿಸಬಾರದು. ಬಾಗಲಕೋಟೆ ಜಿಲ್ಲಾಡಳಿತ ಈ ಘಟನೆ ಬಗ್ಗೆ ಕೂಡಲೆ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ದಲಿತರಿಗೆ ಆಗಿರುವ ಅನ್ಯಾಯಕ್ಕೆ, ಸರ್ಕಾರ ಶೀಘ್ರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.