ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಶುರು
ಹೊಸಪೇಟೆ: ನಗರ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶಿಕ್ಷಣ ಇಲಾಖೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸಲು ಆರಂಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ತಿಳಿಸಿದರು.
ತಾಲೂಕಿನಲ್ಲಿ ಶೇ. 90ರಷ್ಟು ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಣೆಗೆ ಮುಂದಾಗಿದ್ದು, ಶೇ. 10ರಷ್ಟು ಶಿಕ್ಷಣ ಇಲಾಖೆಯಿಂದ ಬರಬೇಕಾಗಿದೆ. 2 ಲಕ್ಷದ 70 ಸಾವಿರದಷ್ಟು ಪುಸ್ತಕಗಳು ಈಗಾಗಲೇ ಬಂದಿರುವುದರಿಂದ ತಕ್ಷಣದಿಂದಲೇ ಪಠ್ಯ ಪುಸ್ತಕಗಳ ವಿತರಣೆಗೆ ಮುಂದಾಗಿದೆ. 3, 4, 7 ಮತ್ತು 10 ನೇ ತರಗತಿ ಮಕ್ಕಳಿಗೆ ಹೊಸ ಪಠ್ಯಕ್ರಮ ಪರಿಚಯ ಮಾಡಿದ್ದು, ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದ ಪುಸ್ತಕಗಳು ಬಂದಿವೆ. 10ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ವಿಷಯದ ಪುಸ್ತಕಗಳು, 7ನೇ ತರಗತಿಯ ಸಮಾಜ ವಿಜ್ಞಾನದ ಒಂದು ಭಾಗ ಇನ್ನು ಬಂದಿರುವುದಿಲ್ಲ. ಸೆಮಿಸ್ಟರ್ ಪದ್ಧತಿ ಈಗಾಗಲೇ ಅಳವಡಿಸಿ ಎರಡ್ಮೂರು ವರ್ಷಗಳು ಆಗಿರುವುದರಿಂದ ಸೆಮಿಸ್ಟರ್ಗೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಜೋಡಿಸಲಾಗುತ್ತಿದ್ದು, ಜೂನ್ನಲ್ಲಿ ಶಾಲೆಗಳು ಆರಂಭವಾಗುವುದರಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡ ವಿತರಣೆಗಾಗಿ ಮಂಗಳವಾರದಿಂದಲೇ ಆರಂಭ ಮಾಡಲಾಗಿದೆ.
ನಗರದ ನಾನಾ ಕಡೆ ಸೇರಿದಂತೆ ತಾಲೂಕಿನ ಕಮಲಾಪುರ, ಕಂಪ್ಲಿ, ಮರಿಯಮ್ಮನಹಳ್ಳಿ, ಗಾದಿಗನೂರು ಹೋಬಳಿಗಳಿಗೆ ವಿತರಣೆ ಮಾಡುವ ಕೆಲಸ ಆರಂಭಿಸಿದ್ದಾರೆ. ಈ ಬಾರಿ ಶಿಕ್ಷಣ ಇಲಾಖೆ ಪ್ರತಿಯೊಂದು ಕ್ಲಸ್ಟರ್ಗಳಿಗೆ ಆಯಾ ಅಧಿಕಾರಿ ಆಯಾ ಗ್ರಾಮದ ಶಾಲೆಗಳಿಗೆ ಹೋಗಿ ವಿತರಣೆ ಮಾಡಬೇಕು ಎಂದು ಜವಾಬ್ದಾರಿ ನೀಡಿದ್ದರಿಂದ ಗ್ರಾಮೀಣ ಭಾಗದ ಶಿಕ್ಷಕರು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಈಗಾಗಲೇ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ಪೂರೈಕೆ ಮಾಡಲು ಬಿಆರ್ಸಿಗಳು, ಸಿಆರ್ಸಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಭಾಗದ ಎಲ್ಲ ಶಾಲೆಗಳಿಗೆ ಮತ್ತು ನಗರದ ಎಲ್ಲ ಶಾಲೆಗಳಿಗೆ ವಿತರಣೆ ಮಾಡುತ್ತಿದ್ದೆವೆ ಎಂದರು.