ರು. 7.73 ಕೋಟಿ ವಿದ್ಯುತ್ ಬಿಲ್ ಬಾಕಿ
ಹಗರಿಬೊಮ್ಮನಹಳ್ಳಿ: ಕುಡಿವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಇತ್ತ ತುಂಗಭದ್ರಾ ನದಿಯಿಂದ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಪೂರೈಕೆ ಮಾಡುವ ಕುಡಿವ ನೀರಿಗಾಗಿ ಆರಂಭದಿಂದ ಇಲ್ಲಿವರೆಗೂ ಬಳಸಿರುವ ವಿದ್ಯುತ್ ಬಾಕಿ ಬರೋಬ್ಬರಿ ರು. 7.73 ಕೋಟಿ ಇದ್ದು, ಈ ಮೂರು ಪಟ್ಟಣಗಳ ನೆತ್ತಿಮೇಲೆ ತೂಗುಕತ್ತಿ ನೇತಾಡುತ್ತಿದೆ.
ಬಾಕಿ ಪಾವತಿಸದಿದ್ದರೆ ಯಾವುದೇ ಸಮಯದಲ್ಲಾದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಈಗಾಗಲೇ ನೂರಾರು ಎಚ್ಚರಿಕೆಯ ನೋಟಿಸ್ಗಳನ್ನು ಹಗರಿಬೊಮ್ಮನಹಳ್ಳಿ ಜೆಸ್ಕಾಂನಿಂದ ಮೂರು ಪಟ್ಟಣಗಳ ಸ್ಥಳೀಯಾಡಳಿತಕ್ಕೆ ರವಾನೆಯಾಗಿದ್ದು, ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಒಂದು ವೇಳೆ ಜೆಸ್ಕಾಂ ಅಧಿಕಾರಿಗಳೇನಾದರೂ ಕುಡಿವ ನೀರಿನ ಸ್ಥಾವರಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇ ಆದರೆ, ಈ ಮೂರು ಪಟ್ಟಣಗಳ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು ಮೂರು ಪಟ್ಟಣಗಳಿಗೆ ಸೇರಿದ ಸುಮಾರು ಎರಡು ಲಕ್ಷದಷ್ಟು ಜನರು ಬಿರುಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಪಡಲಿದ್ದಾರೆ.
ಸ್ಥಳೀಯಾಡಳಿತ ಜವಾಬ್ದಾರಿ: ತಾಲೂಕಿನ ಬನ್ನಿಗೋಳ ಬಳಿ ಹರಿಯುವ ತುಂಗಾಭದ್ರಾ ನದಿಯಿಂದ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಸಂಯುಕ್ತ ನೀರು ಸರಬರಾಜು ಯೋಜನೆಯಡಿ ಜೂನ್ 2007ರಿಂದ ನಿತ್ಯವೂ ಕುಡಿವ ನೀರು ಪೂರೈಸಲಾಗುತ್ತಿದೆ. ಬನ್ನಿಗೋಳ ಬಳಿಯ ಜಾಕ್ವೆಲ್ ಸ್ಥಾಪಿಸಿ ಅಲ್ಲಿಂದ ಸುಮಾರು 30 ಕಿ.ಮೀ. ದೂರದ ಪಟ್ಟಣದ ರಾಮನಗರದ ಗಂಗಾವತಿ ಭೀಮಪ್ಪನವರ್ ಸರ್ಕಾರಿ ಪದವಿಪೂರ್ವಕಾಲೇಜಿನ ಕ್ರೀಡಾಂಗಣದಲ್ಲಿ 10.54 ಎಂಎಲ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕಕ್ಕೆ ನಿತ್ಯ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಇಲ್ಲಿ ಶುದ್ಧಿಕರಿಸಿದ ನೀರನ್ನು ತಾಲೂಕಿನ ಬೆಣಕಲ್ಲು ಗ್ರಾಮ ಬಳಿಯ ಸಂಗ್ರಹಣ ಘಟಕಕ್ಕೆ ಪೂರೈಸಿ ಅಲ್ಲಿಂದ ಕೊಟ್ಟೂರು ಹಾಗೂ ಕೂಡ್ಲಿಗಿ ಪಟ್ಟಣಗಳಿಗೆ ನೀರು ಪೂರೈಸಿದರೆ, ಪಟ್ಟಣದ ಶುದ್ಧೀಕರಣ ಘಟಕದಿಂದ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ನೀರು ನೀಡಲಾಗುತ್ತದೆ. ಈ ಮೂರು ಪಟ್ಟಣಗಳಿಗೆ ಪೂರೈಸಲು ನಿತ್ಯ ಬಳಸುವ ವಿದ್ಯುತ್ ಬಿಲ್ ಆಯಾ ಪಟ್ಟಣದ ಸ್ಥಳೀಯಾಡಳಿತಗಳು ಭರಿಸಬೇಕು. ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣ ಪಂಚಾಯ್ತಿ ಆಡಳಿತ ಹೊಂದಿದ್ದರೆ, ಹಗರಿಬೊಮ್ಮನಹಳ್ಳಿ ಪಟ್ಟಣ ಚಿಂತ್ರಪಳ್ಳಿ ಗ್ರಾಪಂ ಆಡಳಿತಕ್ಕೆ ಒಳಪಟ್ಟಿದೆ.
ಬಾಕಿ ಬಿಲ್: ಜೂನ್, 8, 2007ರಿಂದ ನೀರು ಪೂರೈಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅಲ್ಲಿಂದ ಇಲ್ಲಿವರೆಗೂ ಮೂರು ಪಟ್ಟಣಗಳಿಂದ ರು. 7.73 ಕೋಟಿ ಬಾಕಿ ಇದೆ. ಇದು ಮಾರ್ಚ್ 2014ರ ಅಂತ್ಯದ್ದು. ಈ ಪೈಕಿ ಚಿಂತ್ರಪಳ್ಳಿ ಗ್ರಾಪಂ ರು. 3.17 ಕೋಟಿ, ಕೊಟ್ಟೂರು ಪಪಂ 3.19 ಕೋಟಿ, ಕೂಡ್ಲಿಗಿ ಪಪಂ ರು. 1.53 ಕೋಟಿ ಬಾಕಿ ಇದೆ. ಈ ಪೈಕಿ ಬಡ್ಡಿಯೇ ರು. 74.91 ಲಕ್ಷ ಇದೆ. ಚಿಂತ್ರಪಳ್ಳಿ ಗ್ರಾಪಂನ ಬಾಕಿಗೆ ಇಲ್ಲಿವರೆಗಿನ ಬಡ್ಡಿ ರು. 56.42 ಲಕ್ಷ, ಕೊಟ್ಟೂರು ಪಪಂ ರು. 10.37 ಲಕ್ಷ ಹಾಗೂ ಕೂಡ್ಲಿಗಿ ಪಪಂ ರು. 8.11 ಲಕ್ಷ ಬಾಕಿ ಇದೆ.
ಗ್ರಾಪಂಗೆ ಹೊರೆ: ಹಗರಿಬೊಮ್ಮನಹಳ್ಳಿ ಪಟ್ಟಣವಾದರೂ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಒಳಪಟ್ಟಿದೆ. ಹೀಗಾಗಿ ಇಲ್ಲಿ ತೆರಿಗೆ ಸಂಗ್ರಹ ಕಡಿಮೆ. ಜೊತೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರುವುದಿಲ್ಲ. ಹೀಗಾಗಿ ಕುಡಿವ ನೀರಿಗಾಗಿ ಬಳಸಿರುವ ವಿದ್ಯುತ್ ಬಿಲ್ ಬಾಕಿ ಚಿಂತ್ರಪಳ್ಳಿ ಗ್ರಾಪಂಗೆ ದೊಡ್ಡ ಹೊರೆಯೇ ಸರಿ. ಕೊಟ್ಟೂರು, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಹೊಂದಿರುವುದರಿಂದ ಇವುಗಳಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಬಾಕಿ ಬಿಲ್ ಇವುಗಳಿಗೆ ಹೊರೆಯಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ಗಗನದೆತ್ತರಕ್ಕೆ ಬೆಳೆದು ನಿಂತಿರುವ ವಿದ್ಯುತ್ ಬಿಲ್ ಬಾಕಿ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣದ ಕುಡಿಯುವ ನೀರಿನ ಮೇಲೆ ನಿತ್ಯ ತೂಗುಕತ್ತಿಯೇ ಸರಿ.
ವಿದ್ಯುತ್ ಬಿಲ್ ಬಾಕಿ: ಸಾಕಷ್ಟು ಬಾರಿ ನೋಟಿಸ್
ಕುಡಿವ ನೀರಿನ ಸ್ಥಾವರ ಆರಂಭವಾದ ದಿನಗಳಿಂದಲೂ ಇಲ್ಲಿವರೆಗೂ ಬಳಸಿರುವ ವಿದ್ಯುತ್ಗೆ ಈ ಮೂರು ಪಟ್ಟಣಗಳಿಂದ ಮಾರ್ಚ್ವರೆಗೂ ರು. 7.73 ಕೋಟಿ ವಿದ್ಯುತ್ ಬಿಲ್ ಬಾಕಿ ಬರಬೇಕಾಗಿದ್ದು, ಸಾಕಷ್ಟು ಬಾರಿ ನಾವು ಬಿಲ್ ಪಾವತಿಸುವಂತೆ ನೋಟಿಸ್ ನೀಡುತ್ತಲೇ ಬರುತ್ತಿದ್ದೇವೆ. ಆದರೆ, ನಾವು ನಿರೀಕ್ಷಿಸಿದ ಪ್ರಮಾಣದಲ್ಲಿ ಬಿಲ್ ಬಾಕಿ ಪಾವತಿಯಾಗುತ್ತಿಲ್ಲ.
ಪ್ರತಿ ತಿಂಗಳು ಕಟ್ಟುವ ಹಣ ಅದು ಆಯಾ ತಿಂಗಳು ಈ ಮೂರು ಪಟ್ಟಣಗಳು ನೀರಿಗೆ ಬಳಸುವ ವಿದ್ಯುತ್ ಬಿಲ್ಗೆ ಸಾಲುತ್ತಿಲ್ಲ. ಪ್ರತಿನಿತ್ಯ ಕನಿಷ್ಠ ಲಕ್ಷ ಯುನಿಟ್ನಷ್ಟು ವಿದ್ಯುತ್ ಬಳಕೆಯಾಗುತ್ತಿದೆ.
ಪ್ರತಿ ತಿಂಗಳಿನ ಬಿಲ್ಲೇ ಸುಮಾರು ರು. 7 ಲಕ್ಷದಷ್ಟಿದೆ. ಇದರ ಮೇಲೆ ಪ್ರತಿ ತಿಂಗಳು ಬಾಕಿ ಮೇಲೆ ಕನಿಷ್ಠ ರು. 6 ಲಕ್ಷ ಬಡ್ಡಿ ಬೀಳುತ್ತಿದೆ. ಹೀಗಾಗಿ ಮೂರು ಪಟ್ಟಣಗಳು ಕಟ್ಟುವ ಬಿಲ್ ಹಿಂದಿನ ಬಾಕಿಗೆ ಜಮಾ ಆಗುತ್ತಿಲ್ಲ. ನಾವು ಪ್ರತಿ ತಾಪಂ, ಜಿಪಂ ಸಾಮಾನ್ಯ ಸಭೆಗಳಲ್ಲಿ ವಿದ್ಯುತ್ ಬಿಲ್ ಬಾಕಿ ಪಾವತಿ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದೇವೆ. ಆದರೆ, ಬಾಕಿ ಚುಕ್ತಾ ಆಗುತ್ತಿಲ್ಲ. ಬಾಕಿ ವಸೂಲಾತಿಗೆ ನಮಗೂ ಮೇಲಧಿಕಾರಿಗಳು ಪ್ರತಿ ತಿಂಗಳು ಟಾರ್ಗೆಟ್ ಕೊಟ್ಟಿರುತ್ತಾರೆ. ಟಾರ್ಗೆಟ್ ಮುಟ್ಟದಿದ್ದರೆ ನಮ್ಮ ಸಂಬಳಕ್ಕೆ ಕೊಕ್ಕೆ ಬೀಳುವ ಸಾಧ್ಯತೆಯಿದೆ. ಬಾಕಿ ಕಟ್ಟುವಂತೆ ಮನವಿ ಮಾಡಿಕೊಳ್ಳುತ್ತಲೆ ಇದ್ದೇವೆ. ಬಾಕಿ ಹೆಚ್ಚುತ್ತಲೆ ಇದೆ.
- ಮೋಟ್ಲಾನಾಯ್ಕ,
ಹಗರಿಬೊಮ್ಮನಹಳ್ಳಿ ಜೆಸ್ಕಾಂ ಎಇಇ