ತಾಪಂ ಗದ್ದುಗೆಗೆ ಬಿಜೆಪಿ, ಕಾಂಗ್ರೆಸ್ ಕಾರ್ಯತಂತ್ರ
ಹಗರಿಬೊಮ್ಮನಹಳ್ಳಿ: ಲೋಕಸಭಾ ಚುನಾವಣೆ ಕಾವು ಆರುತ್ತಿದ್ದಂತೆ ಇತ್ತ ತಾಲೂಕು ಪಂಚಾಯ್ತಿ ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಮೀಸಲು ಆದೇಶ ಪ್ರಕಟವಾಗುತ್ತಿದ್ದಂತೆಯೇ ಇತ್ತ ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಚಟುವಟಿಕೆ ಚುರುಕುಗೊಂಡು ರಾಜಕೀಯ ರಂಗೇರಿಸಿವೆ.
ಸ್ಥಳೀಯ ತಾಪಂನ 3ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 16 ಸದಸ್ಯ ಬಲದ ಹಗರಿಬೊಮ್ಮನಹಳ್ಳಿ ತಾಪಂನಲ್ಲಿ ಕಾಂಗ್ರೆಸ್ 10 ಮತ್ತು ಬಿಜೆಪಿ ಆರು ಸದಸ್ಯರ ಬಲ ಹೊಂದಿವೆ. ಕಳೆದ ಎರಡು ಅವಧಿಯಿಂದಲೂ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿದೆ. ಮೂರನೇ ಅವಧಿಯ ಅಧಿಕಾರ ಚುಕ್ಕಾಣಿಯೂ ಕೈವಶವಾಗುವುದು ಖಚಿತ.
ಗುಂಪುಗಾರಿಕೆ ತಲೆನೋವು
ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸಮಯದಲ್ಲಿ ಆಡಳಿತಾರೂಢ ಪಕ್ಷದಲ್ಲಿ ಉದ್ಭವಿಸಿದ ಗುಂಪುಗಾರಿಕೆ, ಭಿನ್ನಮತ ನಂತರದ ವಿಧಾನಸಭಾ ಚುನಾವಣೆಯಲ್ಲಿ ಸಂಭವಿಸಿದ ರಾಜಕೀಯ ಧ್ರುವೀಕರಣಗಳು ತಾಲೂಕಿನಲ್ಲಿ ಪಕ್ಷವನ್ನು ಸಾಕಷ್ಟು ಹೈರಾಣ ಮಾಡಿದೆ. ಇದೇ ವೇಳೆ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ತಾಲೂಕಿನ ಕಾಂಗ್ರೆಸ್ನಲ್ಲಿ ಐದಾರು ಗುಂಪುಗಳು ಜನ್ಮ ತಾಳಿದ್ದು, ಇರುವ ಹತ್ತು ಸದಸ್ಯರು ಆ ಗುಂಪುಗಳಲ್ಲಿ ಕರಗಿ ಹೋಗಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಆಡಳಿತಾರೂಢರಲ್ಲಿ ಯಾವುದೂ ಸರಿಯಿಲ್ಲ. ಹೀಗಾಗಿ ಈ ಸಲ ಸುಲಭವಾಗಿ ಮೂರನೇ ಅವಧಿಯ ಅಧಿಕಾರ ಚುಕ್ಕಾಣಿ ಕಾಂಗ್ರೆಸಿಗೆ ಸಿಗುವುದೇ ಎಂಬ ಪ್ರಶ್ನೆ ದೊಡ್ಡದಾಗಿದೆ.
ಆಕಾಂಕ್ಷಿಗಳು
ತಾಲೂಕಿನ ಚಿಂತ್ರಪಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಉಪ್ಪಾರ ಬಾಲಪ್ಪ, ಹಂಪಾಸಾಗರ ಕ್ಷೇತ್ರದ ಉಮೇಶ ಹಾಗೂ ಪಿಂಜಾರ್ ಹೆಗ್ಡಾಳ ಕ್ಷೇತ್ರದ ಎಂ.ಎಂ. ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಆಡಳಿತಾರೂಢ ಪಾಳೆಯದಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಪ್ರತಿನಿಧಿಸುವ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಂಪಾಸಾಗರ ಕ್ಷೇತ್ರದ ಅಭ್ಯರ್ಥಿ ಕೆ. ಉಮೇಶ ಉಮೇದುವಾರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬೆಂಬಲಿಸುವ ಸಾಧ್ಯತೆಗಳಿವೆ.
ಆಡಳಿತಾರೂಢ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಭಿನ್ನಮತದ ಲಾಭ ಪಡೆಯಲು ಆರು ಸದಸ್ಯ ಬಲದ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯರ ಭಿನ್ನಮತವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈ ಬಾರಿಯೂ ಅದೇ ರೀತಿ ಅವಕಾಶ ಬರಬಹುದೆಂದು ಬಿಜೆಪಿ ಕಾಯುತ್ತಿದೆ. ಸದ್ಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬೆಣಕಲ್ಲು ಪ್ರಕಾಶ ತಾಪಂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಅವಧಿ ಮುಕ್ತಾಯ
ಎರಡನೇ ಅವಧಿಗೆ ಆಯ್ಕೆಗೊಂಡಿರುವ ಅಧ್ಯಕ್ಷ- ಉಪಾಧ್ಯಕ್ಷರ ಅವಧಿ ಜೂನ್ 10ಕ್ಕೆ ಮುಕ್ತಾಯಗೊಳ್ಳಲಿದೆ. ಈ ಅವಧಿಯೊಳಗೆ ಚುನಾವಣೆ ಜರುಗಲಿದೆ.