ದಲಿತರ ಮೇಲೆ ಹಲ್ಲೆ: ಅಂಬೇಡ್ಕರ್ ಸಂಘ ಖಂಡನೆ
ಬಳ್ಳಾರಿ: ದೇವಸ್ಥಾನ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ ನಡೆಸಿದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗಣಿ ಗ್ರಾಮದ ಸವರ್ಣೀಯರ ಕ್ರಮವನ್ನು ಸ್ಥಳೀಯ ಜಿಲ್ಲಾ ಡಾ. ಬಿ.ಆರ್. ಆಂಬೇಡ್ಕರ್ ಸಂಘವು ತೀವ್ರವಾಗಿ ಖಂಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಂ.ವಿ. ಎರಕುಲಸ್ವಾಮಿ, ಗ್ರಾಮದ ಹನುಮಾನ್ ದೇವರ ಉತ್ಸವದ ವೇಳೆ ದೇವಸ್ಥಾನದೊಳಗೆ ಪ್ರವೇಶಿಸಿದ ದಲಿತರ ಮೇಲೆ ಸ್ಥಳೀಯ ಸವರ್ಣೀಯರು ಹಲ್ಲೆ ನಡೆಸಿದ್ದಲ್ಲದೇ, ಬಿಡಿಸಲು ಬಂದವರಿಗೂ ಥಳಿಸಿದ್ದಾರೆ. ಘಟನೆಯಲ್ಲಿ ಎಷ್ಟೇ ಪ್ರಭಾವಿಗಳ ಕೈವಾಡವಿದ್ದರೂ, ಕೂಡಲೇ ಅವರ ವಿರುದ್ಧ ಕ್ರಮಕೈಗೊಂಡು ಗಡಿಪಾರು ಮಾಡಬೇಕು. ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.