ಬಿಜೆಪಿಗೆ 18ಕ್ಕೂ ಹೆಚ್ಚು ಸ್ಥಾನ: ಶಿವರಾಮಗೌಡ
ಸಿರುಗುಪ್ಪ: ಕರ್ನಾಟಕದಲ್ಲಿ ಬಿಜೆಪಿ 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಕೊಪ್ಪಳ ಸಂಸದ ಎನ್. ಶಿವರಾಮಗೌಡ ಭವಿಷ್ಯ ನುಡಿದರು. ತಾಲೂಕಿನ ತೆಕ್ಕಲಕೋಟೆ ಕಂಬಾಳಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುತೇಕ ಹೆಚ್ಚಿನ ಸ್ಥಾನಗಳು ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ, ಸ್ಥಿರ ಸರ್ಕಾರ ನೀಡುವಲ್ಲಿ ವೈಫಲ್ಯದಿಂದಾಗಿ ಜನರು ಬೇಸತ್ತು ಬಿಜೆಪಿಯತ್ತ ವಾಲಿದ್ದಾರೆ. ಕಳೆದ ಲೋಕಸಭಾ ಚುನಾವಣಿಯಲ್ಲಿ 17 ಜನರು ಕಣದಲ್ಲಿದ್ದು 84 ಸಾವಿರ ಮತಗಳಿಂದ ನನ್ನ ಗೆಲವಿಗೆ ಮತದಾರರು ಕಾರಣರಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.