ಮಕ್ಕಳಿಗೆ ಧಾರ್ಮಿಕ ಜಾಗೃತಿ ನೀಡಿ: ದ್ವಾರಕನಾಥ
ಗಂಗಾವತಿ: ಪಾಲಕರು ಶಿಕ್ಷಣದೊಂದಿಗೆ ತಮ್ಮ ಮಕ್ಕಳಲ್ಲಿ ಧಾರ್ಮಿಕ ಆಚರಣೆ, ಧಾರ್ಮಿಕ ಜಾಗೃತಿ ಮೂಡಿಸಬೇಕು ಎಂದು ಪಂಡಿತ್ ದ್ವಾರಕನಾಥ ಆಚಾರ್ ಹೇಳಿದರು. ಅವರು ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಕ್ಕಳಿಗೆ ದೇವರ ನಾಮಗಳ ಬಗ್ಗೆ ತಿಳಿ ಹೇಳುವ ಕೆಲಸವಾಗಬೇಕಾಗಿದೆ. ಮಂತ್ರಾಲಯದ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥರು ಚಿಕ್ಕ ಮಕ್ಕಳು, ಯುವಕರು, ದೊಡ್ಡವರಿಗಾಗಿ ಉಚಿತವಾಗಿ ಮೇ 1ರಿಂದ 10ರ ವರೆಗೆ ಧಾರ್ಮಿಕ ಶಿಬಿರ ಏರ್ಪಡಿಸಿದ್ದಾರೆ. ಮಕ್ಕಳನ್ನು ಶಿಬಿರಕ್ಕೆ ಕಳುಹಿಸಬೇಕು ಎಂದರು. ಶರದ್ ದಂಡಿನ, ರಾಘವೇಂದ್ರ ಆಶ್ರಿತ, ಕೃಷ್ಣರಾವ್ ದೇಸಾಯಿ ಮಾತನಾಡಿದರು. ಶ್ರೀಕಾಂತ ಆಚಾರ, ಸಮೀರ್ ಆಚಾರ, ವ್ಯವಸ್ಥಾಪಕ ಹನುಮೇಶ ಋಗ್ವೇದಿ, ಕೋಟೆ ಆಚಾರ, ಉದಯ ಜಹಾಗೀರದಾರ, ಶ್ರೀನಿವಾಸ ಹೇರೂರ ಇದ್ದರು.
ಯುವಕರಿಗೆ ಕಾರ್ಯಾಗಾರ
ಬಳ್ಳಾರಿ: ಭಾರತೀಯ ವೆಲ್ಫೇರ್ ಸೊಸೈಟಿ ಮತ್ತು ಸ್ಥಳೀಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೈನ್ಸ್ ಆಶ್ರಯದಲ್ಲಿ ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಈಚೆಗೆ ಜರುಗಿತು. ಸ್ವಾಮಿ ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ಸದಸ್ಯ ಮಹಾವೀರ ಕಾರ್ಯಾಗಾರವನ್ನು ಉದ್ಘಾಟಿಸಿದರು. ಭಾರತೀಯ ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ಎಚ್.ಡಿ. ಶಿವರಾಮ್ ಮಾತನಾಡಿದರು. ಸ್ಫೂರ್ತಿ ಚಾರಿಟೆಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಜೆ. ಜಕ್ರಿಯಾ, ಕಾಲೇಜಿನ ಪ್ರಾಚಾರ್ಯ ಸಿ. ವೆಂಕಟೇಶ್, ಕಾಣೆಯಾದ ಮಕ್ಕಳ ಘಟಕದ ಸಂಯೋಜಕ ಎಚ್. ವೀರೇಶ್, ಉಪನ್ಯಾಸಕ ಜಗನ್ನಾಥ್, ಜಡೇಶ್, ಬಸವರಾಜ್ ಕಾಂಬಳೆ, ವಿದ್ಯಾರ್ಥಿನಿ ಸುಲಕ್ಷಣ ದೇವಿ ಹಾಗೂ ಇತರರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಕೆ. ರಾಜೇಶ್ ಬಾಬು ನಿರ್ವಹಿಸಿ, ವೈ. ಹಂಪಮ್ಮ ವಂದಿಸಿದರು.