ಕ್ರಮ ಖಾತ್ರಿ: ತಪ್ಪಿತಸ್ಥರ ಮೇಲಿಲ್ಲ ಕ್ರಮ
ಶಶಿಧರ ಮೇಟಿ ಚೇಳ್ಳಗುರ್ಕಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 27
ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತ್ರಿಯಲ್ಲಿಯೇ ದುಡಿಯುವ ಕೈಗಳ ಕೆಲಸ ಕಸಿದುಕೊಂಡು, ಅವ್ಯವಹಾರ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆ ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರವಾಗಿದೆ ಎಂದು ಕಳೆದ ನಾಲ್ಕು ವರ್ಷದಿಂದ ದೂರು ನೀಡಿದರೂ, ಈ ಕುರಿತು ಅಧಿಕಾರಿಗಳ ಪರಿಶೀಲನೆ ಸಂದರ್ಭ ಅವ್ಯವಹಾರ ಮೇಲ್ನೋಟಕ್ಕೆ ಕಂಡು ಬಂದರೂ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮವಿಲ್ಲ.
ಮೇಲಧಿಕಾರಿಗಳನ್ನು ಕ್ರಮಕ್ಕೆ ಒತ್ತಾಯಿಸಿದರೆ, ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯ ಹೊರತು, ತಪ್ಪಿತಸ್ಥರ ಮೇಲೆ ಕ್ರಮವಾಗುತ್ತಿಲ್ಲ. ಇಂತಹ ನಿರ್ಲಕ್ಷ್ಯಗಳೇ ಉದ್ಯೋಗ ಖಾತ್ರಿಯಲ್ಲಿನ ಅವ್ಯವಹಾರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನಬಹುದು.
ಹಣ ಲಪಟಾಯಿಸುವಿಕೆ
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದರೆ, ಗ್ರಾಮಗಳಲ್ಲಿನ ವೈಷಮ್ಯಗಳು ಅನಗತ್ಯ ಆರೋಪಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಸಂಡೂರಿನ ಸುಶೀಲಾನಗರದ ಗ್ರಾಪಂ ವ್ಯಾಪ್ತಿಯಲ್ಲಿ ನೀತಿ-ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದು ಪ್ರತಿ ಗ್ರಾಪಂನಲ್ಲಿ ಸರ್ವೇ ಸಾಮಾನ್ಯ ಆರೋಪವಾದರೂ, ಅಧಿಕಾರಿಗಳ ಪರಿಶೀಲನೆ ಸಂದರ್ಭ ಕೆಲವೊಂದು ಲೋಪದೋಷಗಳು ಕಂಡು ಬಂದಿವೆ ಎಂಬುದನ್ನು ಅಧಿಕಾರಿಗಳು ವರದಿಯಲ್ಲಿ ತಿಳಿಸಿದರೂ, ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ.
ಅವ್ಯವಹಾರ ಕುರಿತ ಅಂತಿಮ ವರದಿ:
ಸುಶೀಲಾನಗರದ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಆರೋಪಗಳ ಕುರಿತಾಗಿ ಪರಿಶೀಲನೆ ನಡೆಸಿ, ಆ. 29, 2013ರಲ್ಲಿಯೇ ಅಂತಿ ವರದಿಯನ್ನು ಜಿಪಂ ಸಿಇಒಗೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರಿಶೀಲನಾಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸುತ್ತಾ, ಯೋಜನೆ ಅಡಿ 53 ಕಾಮಗಾರಿಗಳ ಪೈಕಿ ಕೇವಲ 25 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿರುವುದು, ಬಾಕಿ 33 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿಲ್ಲ. ಪರಿಶೀಲನೆ ಸಂದರ್ಭದಲ್ಲಿ 6 ಕಾಮಗಾರಿಗಳನ್ನು ಪರಿಶೀಲನೆ ನಡೆಸುವ ಸಂದರ್ಭ ಯೋಜನೆ ಅನುಷ್ಠಾನದಲ್ಲಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿಲ್ಲ. ಕಾಮಗಾರಿ ಅನುಷ್ಠಾನದಲ್ಲಿ ತೆಗೆಯಲಾದ ಛಾಯಾಚಿತ್ರಗಳಲ್ಲಿನ ಕೂಲಿಕಾರರು ಮತ್ತು ಎನ್ಎಂಆರ್ನಲ್ಲಿ ದಾಖಲಾದ ಕೂಲಿಕಾರರು ತಾಳೆ ಹೊಂದುವುದಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿರುವುದು, ಪೂರ್ಣ ಪ್ರಮಾಣದ ದಾಖಲೆಗಳನ್ನು ತಪಾಸಣಾ ಸಮಯದಲ್ಲಿ ಹಾಜರುಪಡಿಸದಿರುವುದು, ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರ ಪಡೆಯದಿರುವುದು ಎಂಬ ಅಂಶಗಳು ಕಂಡು ಬಂದಿದೆ ಎಂದು ಅಧಿಕಾರಿಗಳು ತಮ್ಮ ವರದಿಯಲ್ಲಿಯೇ ತಿಳಿಸಿದ್ದಾರೆ.
ನಿರ್ಲಕ್ಷ್ಯ: ಜಲಾನಯನ ಅಧಿಕಾರಿಗಳು ಸಲ್ಲಿಸಿರುವ ವರದಿ ಬಗ್ಗೆ ಜಿಪಂ ಸಿಇಒ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಗಮನಕ್ಕೆ ತಂದರೂ ಗಮನಕ್ಕೆ ತೆಗೆದುಕೊಂಡಿಲ್ಲವಂತೆ. ಈ ಕುರಿತು ದೂರದಾರ ನ್ಯಾಯವಾದಿ ಮಲ್ಲಿಕಾರ್ಜುನ ಮಾತನಾಡಿ, ಸುಶೀಲಾನಗರ ಗ್ರಾಮ ಪಂಚಾಯ್ತಿಯಲ್ಲಿ 2010-11ರಿಂದ ಮೂರು ವರ್ಷಗಳ ಕಾಲ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ರು. 25ರಿಂದ ರು. 30 ಲಕ್ಷ ಅವ್ಯವಹಾರವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಹಿಂಪಡೆಯಬೇಕು, ಪ್ರಕರಣಗಳಲ್ಲಿ ತೊಡಗಿರುವ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.