ಪ್ಲಾಸ್ಟಿಕ್ ವಸ್ತುಗಳಿಂದ ಕೂಡಿದ ಬಸ್ ನಿಲ್ದಾಣ
ಹೂವಿನಹಡಗಲಿ ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣ ಸಾವಿರಾರು ಪ್ರಯಾಣಿಕರು ಇರುವ ಸ್ಥಳವಾಗಿದ್ದರಿಂದ ಬಸ್ ನಿಲ್ದಾಣ ತುಂಬೆಲ್ಲ ಪ್ಲಾಸ್ಟಿಕ್ ಹರಡಿಕೊಂಡು ಕಲುಷಿತಗೊಂಡಿದೆ.
ಸಾರಿಗೆ ಘಟಕದ ವ್ಯವಸ್ಥಾಪಕರು ನಿತ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಇವರಿಗೆ ಸಾರ್ವಜನಿಕರು, ಪ್ರಯಾಣಿಕರು ತಂಗಲು ಮಾಡಿರುವ ಉದ್ಯಾನ ಸಂಪೂರ್ಣ ಪ್ಲಾಸ್ಟಿಕ್ಮಯವಾಗಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ತಗ್ಗಾಗಿರುವ ಉದ್ಯಾನದಲ್ಲಿ ಅಕ್ಕಪಕ್ಕದ ಹೋಟೆಲ್ನವರು ಪ್ಲಾಸ್ಟಿಕ್ ಕಪ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ತ್ಯಾಜ್ಯ ಸಂಗ್ರಹಗಾರದಂತಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಛತೆ ಕಾಪಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಿ.
ನಾಗರಾಜ ಬಿ., ಪ್ರಯಾಣಿಕರು
ತೇರು ಬಯಲು ಜಾಗ ಸ್ವಚ್ಛವಾಗಿಡಿ
ಕೊಟ್ಟೂರು: ಕೊಟ್ಟೂರು ಪಟ್ಟಣದ ತೇರು ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದುದ್ದಕ್ಕೂ ಕಸದ ರಾಶಿ ವ್ಯಾಪಿಸಿ ಕಲ್ಮಶದ ವಾತಾವರಣ ನಿರ್ಮಾಣಗೊಂಡಿದೆ.
ದೇವಸ್ಥಾನದ ಈ ಪ್ರದೇಶ ಸ್ವಚ್ಛವಾಗಿಡಲು ಸ್ಥಳೀಯ ಆಡಳಿತ ಯಾವುದೇ ಪ್ರಯತ್ನ ಮಾಡಿಲ್ಲ. ಪ್ರದೇಶವನ್ನು ಕಸ ಕಡ್ಡಿಗಳನ್ನು ಹಾಕುವ ಸ್ಥಳವನ್ನಾಗಿಸಿರುವುದು ದುರಂತ. ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಇಲ್ಲಿನ ನಾಗರಿಕರು ಹಲವಾರು ಬಾರಿ ದೂರು ನೀಡಿದರೂ ಕಸದ ರಾಶಿ ತೆರವುಗೊಳಿಸಿಲ್ಲ. ದಿನದಿಂದ ದಿನಕ್ಕೆ ಹೊಲಸು ದೊಡ್ಡದಾಗುತ್ತಲೇ ಹೋಗಿದೆ. ಈ ಪ್ರದೇಶದಲ್ಲಿಯೇ ಚಿಕ್ಕ ಮಕ್ಕಳು ಆಟವಾಡುತ್ತಾರೆ. ಕಸ ತುಂಬಿರುವುದರಿಂದ ಬಿಡಾಡಿ ದನ-ಕರುಗಳು ಪದೇ ಪದೇ ಬಂದು ಮತ್ತಷ್ಟು ವಾತಾವರಣ ಕೆಡಿಸುತ್ತಿವೆ. ಈಗಲಾದರೂ ಪಟ್ಟಣ ಪಂಚಾಯಿತಿ ಆಡಳಿತ ಈ ಪ್ರದೇಶ ಸ್ವಚ್ಛವಾಗಿಡುವ ಮೂಲಕ ನಾಗರಿಕರ ಆರೋಗ್ಯ ಕಾಪಾಡಲಿ.
ಚರಂಡಿ ನಿರ್ಮಿಸಲು ಒತ್ತಾಯ
ಹೂವಿನಹಡಗಲಿ ತಾಲೂಕಿನ ಪಶ್ಚಿಮ ಭಾಗದ ಮೂಲೆಕಟ್ಟಿನ ಸ್ಥಳಾಂತರ ಕಾಳೇನಹಳ್ಳಿ ಗ್ರಾಮ ಅಗತ್ಯ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಇಂದಿಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಗ್ರಾಮದ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದ್ದು, ಸಾಂಕ್ರಾಮಿಕ ರೋಗಗಳ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಗ್ರಾಮದ ಸಾಕಷ್ಟು ಕಡೆ ತಗ್ಗು ಪ್ರದೇಶಗಳಿದ್ದು, ಮಳೆಗಾಲದಲ್ಲಿ ಗ್ರಾಮ ಹೊರ ವಲಯದ ಹೊಲಗಳ ನೀರು ಗ್ರಾಮದೊಳಗೆ ನುಗ್ಗುತ್ತಿದೆ. ಮಳೆ ಬಂದಾಗ ಜನಜೀವನ ತುಂಬಾ ಅಸ್ತವ್ಯಸ್ತ. ಅರಳಿಹಳ್ಳಿ ಕೆರೆ ನಿರ್ಮಾಣಕ್ಕೆ ಮೂಲಗ್ರಾಮ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ಗ್ರಾಮವನ್ನು ಎರೆಭೂಮಿಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದಾರೆ. ಇಲ್ಲಿ ಕಪ್ಪು ಭೂಮಿಯಾಗಿರುವುದರಿಂದ ಮಳೆ ಬಂದಾಗ ನಡೆದಾಡಲು ಕಷ್ಟವಾಗುತ್ತದೆ. ಮಳೆ ನೀರು ಬೇರೆಡೆ ಸಾಗಿಸಲು ಸೂಕ್ತ ಚರಂಡಿ ವ್ಯವಸ್ಥೆ, ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ರಸ್ತೆಗಳಿಗೆ ಕಲ್ಲು, ಮಣ್ಣು ಹಾಕಿ ರಸ್ತೆ ಅಭಿವೃದ್ಧಿಪಡಿಸಬೇಕು.
ಟಿ ಬಸವರಾಜ. ಕೊಳಚಿ ಭೀಮಪ್ಪ
ಕಾಳೇನಹಳ್ಳಿ ಗ್ರಾಮಸ್ಥರು