ನೂತನ ಮಹಿಳಾ ಕಾಲೇಜು ಆರಂಭ
ಬಳ್ಳಾರಿ: ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆರಂಭವಾಗಿದ್ದು, ಜೂನ್ 2014ರಿಂದ ಹಲವು ಕೋರ್ಸ್ಗಳ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ನೋಡಲ್ ಅಧಿಕಾರಿ ಪ್ರೊ.ಎಂ. ಗೋಪಾಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಳ್ಳಾರಿ ನಗರದಲ್ಲಿ ನೂತನವಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲು ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗವ ಪಡೆಯಬಹುದಾಗಿದೆ.
ಬಿಎ, ಎಚ್ಇಪಿ, ಎಚ್ಇಕೆ, ಎಚ್ಪಿಎಸ್, ಎಚ್ಪಿಇ, ಬಿಎಸ್ಸಿ ( ಪಿಸಿಎಂ, ಪಿಎಂಸಿಎಸ್) ಬಿಕಾಂ, ಬಿಬಿಎಂ ಪದವಿ ತರಗತಿಗಳು ಪ್ರಾರಂಭವಾಗಲಿವೆ. ಕಾಲೇಜು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ. ಕಾಲೇಜಿನಲ್ಲಿ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ನುರಿತ ಉಪನ್ಯಾಸಕರಿಂದ ಉತ್ತಮ ಬೋಧನೆ ಒದಗಿಸಲಾಗುವುದು. ಎಲ್ಲ ವಿದ್ಯಾರ್ಥಿನಿಯರು ಈ ಸದಾವಕಾಶವನ್ನು ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.
--
ಮಠಗಳು ವಿದ್ಯಾಕೇಂದ್ರವಾಗಲಿ: ಶ್ರೀ
ಸಿರುಗುಪ್ಪ: ಮಠಗಳು ಬಡವ, ಹಿಂದುಳಿದ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವ ವಿದ್ಯಾಕೇಂದ್ರಗಳಾಗಬೇಕೆಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶ್ರೀ ಹೇಳಿದರು.
ಅವರು ತಾಲೂಕಿನ ತೆಕ್ಕಲಕೋಟೆ ಕಂಬಾಳಿ ಮಠದಲ್ಲಿ ಜರುಗಿದ ಮಾನವ ಧರ್ಮ ಸಂದೇಶದಲ್ಲಿ ಆಶೀರ್ವಚನ ನೀಡಿದರು. ಮಠಗಳು ಒಳ್ಳೆಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಜನರಿಗೆ ಕಲಿಸಲು ಮುಂದಾಗಬೇಕು. ತಂದೆ-ತಾಯಿಗಳನ್ನು ನಿಜವಾದ ದೇವರೆಂದು ಪೂಜಿಸಬೇಕು. ಎಲ್ಲಿ ತಂದೆ-ತಾಯಿಯನ್ನು ಪೂಜಿಸುತ್ತಾರೆಯೋ ಅಲ್ಲಿ ದೇವರು ಮತ್ತು ದೇವತೆಗಳು ನೆಲೆಸಿರುತ್ತಾರೆ ಎಂದು ಶ್ರೀಗಳು ಹೇಳಿದರು.
ಹಾಲ್ವಿ ಹಿರೇಮಠ ಕುಟುಂಬದ ದಂಪತಿ ಸದಾಶಿವಯ್ಯಸ್ವಾಮಿ ಹಾಗೂ ದ್ರಾಕ್ಷಾಯಣಿಮ್ಮ ಕಂಬಾಳಿ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಶ್ರೀಗಳಿಗೆ 5ನೇ ತುಲಾಭಾರ ನೆರವೇರಿಸಿದರು.
ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ, ಮಲ್ಲಿಕಾರ್ಜುನಯ್ಯಸ್ವಾಮಿ, ಚೊಕ್ಕಬಸವನಗೌಡ, ಜ್ಞಾನಾನಂದ ಶ್ರೀ ಹಾಗೂ ಇತರರು ಪಾಲ್ಗೊಂಡಿದ್ದರು.