ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮುಗಿದ ಮತದಾನ, ಸುಳಿಯದ ಅಭ್ಯರ್ಥಿ

Rashmi Kasaragodu
Updated On : 30 Apr 2014, 12:40 pm

 ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 29
15 ದಿನಗಳ ಹಿಂದೆ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಬೆಳಗ್ಗೆ ಎದ್ದರೆ ರಾಜಕೀಯ ಮುಖಂಡರ ಆರ್ಭಟ, ಪ್ರಚಾರ, ಕರಪತ್ರ ಹಂಚಿಕೆ, ಮೈಕ್ಗಳಲ್ಲಿ ಭಾಷಣ, ಮತದಾರರಿಗೆ ಡಿಮ್ಯಾಂಡೋ ಡಿಮ್ಯಾಂಡ್. ಕಾಲಿಗೆ ಬಿದ್ದು ಮತ ಕೇಳುವುದು, ಅಯ್ಯ, ಅಪ್ಪ, ಅಣ್ಣ, ತಾಯಿ ಎಂದು ಹೇಳುತ್ತಲೇ ಮತ ಕೇಳುವುದು, ನನ್ನನ್ನು ಈ ಸಲ ಗೆಲ್ಲಿಸಿ ಎಂದು ದಯನೀಯವಾಗಿ ಕೇಳುವ ಪ್ರಸಂಗಗಳು ನಡೆಯುತ್ತಿದ್ದವು. ಇದು ಅಕ್ಷರಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು ಎಂಬುವುದನ್ನು ಎತ್ತಿ ತೋರಿಸುವ ಪ್ರಸಂಗ. ಪ್ರಜೆಗಳು ಈಗಾಗಲೇ ತಮ್ಮ ಮತವನ್ನು ದಾನ ಮಾಡಿರುವುದರಿಂದ ಗಲ್ಲಿ ಗಲ್ಲಿ ಕಾಣಸಿಗುತ್ತಿದ್ದ ರಾಜಕೀಯ ಮುಖಂಡರು, ಪಕ್ಷದ ಬಾವುಟಗಳು ಮಾಯವಾಗಿವೆ.
ಮತ ಕೇಳಲು ಬಂದ ಅಭ್ಯರ್ಥಿಗಳು, ರಾಜಕಾರಣಿಗಳಿಗೆ ಮತದಾರರು ಮಾತ್ರ ಇಷ್ಟು ದಿನ ಏನು ಅಭಿವೃದ್ಧಿ ಮಾಡಿರುವಿರಿ ಎಂದು ಪ್ರಶ್ನಿಸಿದ್ದರು. ಆದರೆ ಅಭ್ಯರ್ಥಿಗಳು ಮಾತ್ರ ಮತದಾರರನ್ನು ಪ್ರಭುವಿನಂತೆ ಮಾತನಾಡಿಸಿ, ಅವರನ್ನು ಸಂತೈಸಿ, ಈಗ ಗೆಲ್ಲಿಸಿ ಮುಂದೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ, ಮತಯಾಚನೆ ಮಾಡಿದ್ದರು. ಕೆಲವೆಡೆ ರಾಜಕಾರಣಿಗಳಿಗೆ ಬೈಯ್ದು, ಮತದಾರ ಪ್ರಭು ಎಂಬುದನ್ನು ತೋರಿಸಿದರೆ ಇನ್ನು ಕೆಲವರು ನಮಗ್ಯಾಕೆ ನಿಷ್ಠುರ ಎಂದು ಅವರಿಗೆ ಜೈ ಎಂದು ಕಳಿಸಿದ್ದರು.
ಬಿಡುವಿಲ್ಲದ ಪ್ರಚಾರ: ಚುನಾವಣೆ ಹತ್ತಿರ ಬಂತೆಂದರೆ ರಾಜಕಾರಣಿಗಳು ತೋರುವ ಮತದಾರರ ಕಾಳಜಿ, ಗೆದ್ದ ಮೇಲೆ, ಅಧಿಕಾರದಲ್ಲಿದ್ದಾಗ ಮತದಾರರು ಹಾಗೂ ಅವರ ಸಾಮೂಹಿಕ ಸಮಸ್ಯೆಗಳ ಬಗ್ಗೆ ತೋರುವ ನಿರ್ಲಕ್ಷ್ಯ, ಉದಾಸೀನ ಭಾವನೆಯೇ ಚುನಾವಣೆಯಲ್ಲಿ ಹೆಚ್ಚಿನ ಶ್ರಮಕ್ಕೆ ಕಾರಣವಾಗುತ್ತದೆ. ಇನ್ನು ಬಿಡುವಿಲ್ಲದ ಪ್ರಚಾರ ಅನಿವಾರ್ಯತೆಯನ್ನು ತಂದುಕೊಡುತ್ತದೆ. ಚುನಾವಣೆ ವೇಳೆ ಮತದಾರರ ಬಗ್ಗೆ ರಾಜಕಾರಣಿಗಳು ಅವರೊಂದಿಗೆ ಬೆರೆಯುವಷ್ಟು ಅಧಿಕಾರದಲ್ಲಿದ್ದಾಗ ಶೇ. 50ರಷ್ಟು ಮತದಾರರೊಂದಿಗೆ, ಅವರ ಸಮಸ್ಯೆಗಳೊಂದಿಗೆ, ಅವರ ಗ್ರಾಮಗಳೊಂದಿಗೆ ಸಂಪರ್ಕವಿದ್ದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ, ಮತದಾರರ ಸಮಸ್ಯೆಗಳು ಬಗೆಹರಿಸುವುದಲ್ಲದೆ, ಮತದಾರರು ಚುನಾವಣೆ ಸಂದರ್ಭದಲ್ಲಿ ಅಂತಹ ರಾಜಕಾರಣಿಗಳನ್ನು ಬರಸೆಳೆದು ಮತ ಹಾಕುತ್ತಾರೆ. ಆದರೆ ಇಂದಿನ ರಾಜಕಾರಣಿಗಳ ನಡೆ ಚುನಾವಣೆಯ ಸಂದರ್ಭದಲ್ಲಿ ಗೆಲವಿಗೆ ಹರಸಾಹಸ ಪಡುವಂತಾಗುತ್ತದೆ.
ಎಲ್ಲೂ ಕಾಣದ ಅಭ್ಯರ್ಥಿಗಳು: ಚುನಾವಣೆ ಪೂರ್ವದಲ್ಲಿಯೇ ಸಾಕಷ್ಟು ಪ್ರಚಾರ ಮಾಡುತ್ತಿದ್ದು, ಅಪ್ಪ-ಅಣ್ಣ ಎನ್ನುವ ಅಭ್ಯರ್ಥಿಗಳು ಚುನಾವಣೆ ಮುಗಿದ ಮರುದಿನವೇ ರಿಲೀಫ್ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಕಾಣಸಿಗುವುದು ಬಿಟ್ಟರೆ, ಒಮ್ಮೆಲೆ ಮತ ಎಣಿಕೆ ಸಂದರ್ಭದಲ್ಲಿ ಕಾಣಿಸುತ್ತಾರೆ. ತೆರಮರೆಯಲ್ಲಿ ಇದ್ದು ಸೋಲು-ಗೆಲವಿನ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಕುಳಿತಿರುತ್ತಾರೆ. ತಮ್ಮ ಹಿಂಬಾಲಕರಿಗೆ ಫೋನಾಯಿಸಿ, ನಿಮ್ಮ ಭಾಗದಲ್ಲಿ ಹೇಗಾಯ್ತು ಮತದಾನ, ನನ್ನ ಬಗೆಗಿನ ಬಲ, ಒಲವು ಇದೆಯೇ ಎಂಬ ವಿಷಯಗಳ ಚರ್ಚೆಯಲ್ಲಿ ನಿರತರಾಗುತ್ತಾರೆ. ಒಂದೊಮ್ಮೆ ಚುನಾವಣೆ ಆದ ಮೇಲೂ, ಮತ ಎಣಿಕೆ ಪೂರ್ವದ ದಿನಗಳಲ್ಲಿಯೇ ಅಭ್ಯರ್ಥಿ ಮತದಾರರ ಬೆರಳಿಣಿಕೆಯ ಗ್ರಾಮಗಳಿಗೆ ಹೋಗಿ, ಮತದಾನ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದರೆ, ಅವನ ಬಗ್ಗೆ ಮತದಾರರಿಗೆ ಭಾವನೆ ಬದಲಾಗುವುದಿಲ್ಲವೇ? ಅಭ್ಯರ್ಥಿ ಸೋಲಲಿ, ಗೆಲ್ಲಲಿ, ಆದರೆ ಮತದಾರರ ಮನಸ್ಸಿನಲ್ಲಿ ಅಂತಹ ರಾಜಕಾರಣಿ ಉಳಿಯಲು ಸಾಧ್ಯ.
ರಾಜಕಾರಣಿಗಳ ಮನೋಭಾವ ಬೇರೆ: ಆದರೆ ಇಂದಿನ ರಾಜಕಾರಣಿಗಳ ಮನೋಭಾವನೆಯೇ ಬೇರೆ. ಇದಕ್ಕೆ ಮತದಾರರ ನಡೆಯೂ ಹೊರತಾಗಿಲ್ಲ ಎಂಬುದು ಸತ್ಯ. ಅಭ್ಯರ್ಥಿಗಳು ಯಾವಾಗ ಚುನಾವಣೆ ಮುಗಿಯುತ್ತದೆ ಎಂಬುದನ್ನೇ ಕಾಯುತ್ತಿರುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಗಂಟಲು ಕಿತ್ತುಕೊಂಡು ಭಾಷಣ ಮಾಡುವುದು ಒಂದು ಕಡೆ ಇರಲಿ. ಮತದಾನದ ವೇಳೆ ದುಡ್ಡು ಗಳಿಸುವ ಕೆಲ ವ್ಯಕ್ತಿಗಳಿಂದಾಗಿ ಅವರ ದುಡ್ಡಿನ, ಮದ್ಯ ಸೇರಿದಂತೆ ಇತರ ಆಮಿಷದ ವಸ್ತುಗಳ ಬೇಡಿಕೆಗೆ ಸಾಕಾಗಿ ಹೋಗುತ್ತದೆ. ಇದರಿಂದ ರಾಜಕಾರಣಿಗಳು ಯಾವಾಗ ಚುನಾವಣೆ ಮುಗಿಯುತ್ತದೆ ಎಂಬ ಗುಂಗಿನಲ್ಲಿಯೇ ಇರುತ್ತಾರೆ. ಚುನಾವಣೆ ಮುಗಿದ ದಿನವೇ ತಿರುಗಿ ನೋಡಿದರೆ ತಿಮ್ಮಪ್ಪನ ಆಣೆ ಎನ್ನುವಂತೆ ಇರುತ್ತಾರೆ. ಕನಿಷ್ಠ ಮಾಧ್ಯಮಗಳ ಮೂಲಕ ಜನರಿಗೆ ಧನ್ಯವಾದ ಸಲ್ಲಿಸುವ ವ್ಯವಧಾನ ತೋರಿಸಬಹುದಲ್ಲ ಎಂಬ ಮಾತು ಜಿಲ್ಲೆಯ ಮತದಾರರದ್ದು.
ರಾಜಕಾರಣಿಗಳ ಈ ನಡೆ ಬದಲಾದರೆ, ಮತದಾರರು ಬದಲಾಗಿ, ಮತದಾರರ ಮನಸ್ಸು ಗೆಲ್ಲಲು ಸಾಧ್ಯ. ಧನ್ಯವಾದ ಅರ್ಪಿಸಿದ ಮಾತ್ರಕ್ಕೆ ಮತದಾರರು ಮತ ಹಾಕುವುದಿಲ್ಲ. ಆದರೆ ಅದು ಸೌಜನ್ಯ, ಈ ಸೌಜನ್ಯವೇ ಮುಂದೆ ಮತದಾರರ ಒಲವಿಗೆ ಕಾರಣವಾಗಬಹುದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement