ಸಿಡಿಲಿಗೆ 37 ಕುರಿ ಸಾವು
ಕೂಡ್ಲಿಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-13ರ ಸಮೀಪದಲ್ಲಿ ಮಂಗಳವಾರ ಸಂಜೆ ಸಿಡಿಲಿಗೆ 37 ಕುರಿಗಳು ಬಲಿಯಾಗಿರುವ ಘಟನೆ ನಡೆದಿದ್ದು, ಈ ವರ್ಷದ ಮುಂಗಾರಿಗೆ ಸಿಡಿಲು ಆರ್ಭಟ ದಿನೇ ದಿನೆ ಜೋರಾಗಿದ್ದನ್ನು ಕಂಡು ಜನತೆ ಭಯಗೊಂಡಿದ್ದಾರೆ. ಪಟ್ಟಣದ ಸೋವೇನಹಳ್ಳಿ ಹನುಮಂತಪ್ಪ ಮತ್ತ ಸೋವೇನಹಳ್ಳಿ ಭೀಮಪ್ಪ ಎಂಬುವವರಿಗೆ ಸೇರಿದ ಕುರಿಗಳು ಮೇಯಿಸಲು ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿವೆ. ಮಳೆ ಬರುವಾಗ ಬೇವಿನ ಮರದ ಕೆಳಗೆ ಗುಂಪಾಗಿ ಕುರಿಗಳು ನಿಂತಿದ್ದವು. ಸಮೀಪದ ಮತ್ತೊಂದು ಬೇವಿನ ಮರದ ಕೆಳಗೆ ಇನ್ನೊಂದು ಕುರಿಗಳ ಗುಂಪು ನಿಂತಿತ್ತು. ಆದರೆ ಒಂದು ಮರದ ಕೆಳಗೆ ನಿಂತಿದ್ದ ಬಹುತೇಕ ಕುರಿಗಳು ಸಾವನ್ನಪ್ಪಿದ್ದು, ಮತ್ತೊಂದು ಮರದ ಕೆಳಗೆ ನಿಂತಿದ್ದ ಕುರಿಗಳಿಗೆ ಯಾವುದೇ ಹಾನಿಯಾಗಿಲ್ಲ. 5 ಕುರಿಗಳು ಗಾಯಗೊಂಡಿವೆ. ಇದರಿಂದಾಗಿ ಕುರಿಗಾಯಿಗಳು ನಷ್ಟ ಅನುಭವಿಸಿದ್ದಾರೆ.
ಕುರಿಗಳಿಗೆ ಸಿಡಿಲು ಬಡಿಯುವ ಮುನ್ನ ಎರಡೇ ನಿಮಿಷಗಳಲ್ಲಿ ಕುರಿಗಳನ್ನು ಬಿಟ್ಟು ಮಳೆಗೆ ಬೆದರಿ ಪಕ್ಕದ ಪಂಪ್ಸೆಟ್ ರೂಮಿಗೆ ಆಶ್ರಯಿಸಿ ಹೋಗಿದ್ದೆವು, ರೂಮ್ ಒಳಗೆ ಹೋದ ತಕ್ಷಣ ಸಿಡಿಲು ಬಡಿದಿದೆ. ಆಗ ನಾವು ಅಲ್ಲಿ ಇಲ್ಲದ ಕಾರಣ ಅವರ ಬದುಕುಳಿದೆವು. ಕುರಿ ಹಿಂಡಿನ ಬಳಿ ಒಂದೆರಡು ನಿಮಿಷ ನಿಂತಿದ್ದರೆ ನಮ್ಮಿಬ್ಬರಿಗೂ ಸಿಡಿಲು ಬಡಿಯುವ ಸಂಭವವಿತ್ತು ಎನ್ನುತ್ತಾರೆ ಕುರಿ ಮೇಯಿಸುತ್ತಿದ್ದ ಹನುಮಂತಪ್ಪ, ಭೀಮಪ್ಪ. ಸಿಡಿಲಿಗೆ ತಾಲೂಕಿನಲ್ಲಿ ವಾರದಲ್ಲಿಯೇ ಹತ್ತಾರು ಜಾನುವಾರುಗಳು, ಕುರಿ, ಮೇಕೆಗಳು ಈಗಾಗಲೇ ಬಲಿಯಾಗಿದ್ದು, ಮಾಲೂರಿನಲ್ಲಿ ಹನುಮಂತಪ್ಪ ಎಂಬಾತ ಸಾವನ್ನಪ್ಪಿ ಮೂವರಿಗೆ ಗಾಯಗಳಾಗಿರುವ ಸುದ್ದಿ ಮರೆಯಾಗುವ ಮುನ್ನವೇ 37 ಕುರಿಗಳು ಸಿಡಿಲಿಗೆ ಬಲಿಯಾಗಿದ್ದರಿಂದ ಈ ಭಾಗದ ಜನತೆಯಲ್ಲಿ ಮಳೆ ಬಂತೆಂದರೆ ಸಿಡಿಲಿನ ಭಯ ಪ್ರಾರಂಭವಾಗುತ್ತದೆ.